ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ವಿಚಾರಕ್ಕೆ ಹೆಚ್ಚಿನ ಒತ್ತು : ಕೆ.ಎಸ್.ಆನಂದ್

ಸುದ್ದಿ ಕಡೂರು :ತಾಲ್ಲೂಕಿನ ರೈತರ ಜೀವನಾಡಿ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ನಿರಂತರ ಶ್ರಮ ನನ್ನದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲ್ಲೂಕಿನ ಮಧಗದ ಕೆರೆ ಅಧಿಕೃತ ನೀರು ಹಾಯಿವಳಿ ಅಡಿಕೆ ಬೆಳೆಗಾರರ ಸಂಘ ಸೋಮವಾರ ಕಡೂರು ಪಟ್ಟಣದ ಕೆ.ಹೊಸಳ್ಳಿಯ ಗಂಗಾಂಭಿಕ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮದಗದ ಕೆರೆಯ ಅಧಿಕೃತ ಹಾಯಿವಳಿಗಿಂತ ಬಹಳಷ್ಟು ಹೆಚ್ಚು ಹಾಯಿವಳಿಯಿದೆ. ಹಿಂದಿನ ಶಾಸಕರುಗಳು ಅವರ ಅವಧಿಯಲ್ಲಿ ಈ ಕೆರೆ ನೀರಿನ ವಿಚಾರದಲ್ಲಿ ಸೂಕ್ತವಾಗಿ ನಿರ್ವಹಿಸಿದ್ದಾರೆ. ಆದರೆ ಇದೀಗ ಹಲವಾರು ಸಮಸ್ತೆಗಳು ಉದ್ಭವವಾಗಿದೆ.ಇವುಗಳನ್ನು ಪರಿಹರಿಸುವುದು ಸವಾಲಿನ ಕಾರ್ಯವೇ ಆಗಿದೆ. ಮತ್ತು ಇದು ನನಗೆ ಸಿಕ್ಕ ಸದವಕಾಶವೂ ಹೌದು. ಮಧಗದ ಕೆರೆ ಹಾಯಿವಳಿ ಪ್ರದೇಶದ ತೋಟಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೆ ನಾನು ಬದ್ದನಾಗಿದ್ದೇನೆ ಎಂದರು.
ತಾಲ್ಲೂಕಿನ ಬಹುತೇಕ ಅಡಿಕೆ ತೆಂಗು ತೋಟಗಳು ಅಳಿವು ಉಳಿವು ಮಧಗದ ಕೆರೆಯನ್ನೇ ಅವಲಂಬಿಸಿದೆ. ಅಡಿಕೆ ಬೆಳೆಗಾರರ ಸಂಕಷ್ಟದ ಅರಿವಿದೆ. ಇದು ಕೇವಲ ಸನ್ಮಾನ ಸಮಾರಂಭವಲ್ಲ. ಬದಲಾಗಿ ಇದು ಅಡಿಕೆ ಬೆಳೆಗಾರರ ಸಂಕಷ್ಟದ ಅವಲೋಕನದ ಸಭೆಯೆಂದು ಭಾವಿಸಿದ್ದೇನೆ. ಈ ಹಿಂದೆಯೂ ಮಧಗದ ಕೆರೆಯ ವೇಳೆ ವಿಚಾರವಾಗಿ ಬಹಳಷ್ಟು ಹೋರಾಟಗಳಲ್ಲಿ ಭಾಗವಹಿಸಿದ್ದೇನೆ.ಮಧಗದ ಕೆರೆಗೆ ಶಾಶ್ವತವಾಗಿ ನೀರು ಹರಿಸುವ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಸಂಬಂಧಿಸಿದವರೊಂದಿಗೆ ಚರ್ಚಿಸುತ್ತೇನೆ.ಈ ಹಿಂದೆ ಹೆಬ್ಬೆಯಿಂದ ಈ ಕೆರೆಗೆ ನೀರು ತರುವ ಯೋಜನೆಯಿತ್ತು. ಮಾಜಿ ಪ್ರಧಾನಿಗಳೇ ನಮ್ಮ ಜೊತೆಯಿದ್ದರೂ ಈ ಯೋಜನೆಗೆ ಮಂಜೂರಾತಿ ಪಡೆಯಲು ವಿಫಲರಾದೆವು. ನಂತರದಲ್ಲಿ ಗೊಂದಿ ಯೋಜನೆ ಹಲವಾರು ಬದಲಾವಣೆ ಕಂಡು ಇದೀಗ ಭಧ್ರಾ ಉಪಕಣಿವೆ ಯೋಜನೆಯಾಗಿ ಆರಂಭವಾಗಿದೆ. ಆದರೆ ಅದಕ್ಕೆ ವೇಗ ದೊರೆತಿಲ್ಲ. ಈ ಯೋಜನೆಯನ್ನು ನಬಾರ್ಡ್ ಮೂಲಕ ಅನುಷ್ಟಾನಗೊಳಿಸಲು ಈಗಾಗಲೇ ಮಾನ್ಯ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ. ಭಧ್ರಾ ಮೇಲ್ದಂಡೆ ಯೋಜನೆಯ ತುಮಕೂರು ಕಾಲುವೆ ಮೂಲಕ ತಾಲ್ಲೂಕಿನ 32 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದರೂ ಅನುಷ್ಟಾನ ವಿಳಂಬವಾಗಿದೆ. ಅದರ ಬಗ್ಗೆಯೂ ತುರ್ತು ಗಮನ ಹರಿಸುತ್ತೇನೆ. ತಾಲ್ಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುವುದು ನನ್ನ ಆಶಯವೂ ಆಗಿದೆ. ನನ್ನ ಪ್ರಯತ್ನ ನಿರಂತರ. ತಮ್ಮೆಲ್ಲರ ಸಹಕಾರವೂ ಬಹು ಮುಖ್ಯ ಎಂದರು.
ಅಡಿಕೆ ತೆಂಗು ತೋಟಗಳು ಅಳಿವು ಉಳಿವು ಮದಗದ ಕೆರೆಯನ್ನೇ ಅವಲಂಬಿಸಿದೆ. ಯಾವ ರೈತರಿಗೂ ಅನ್ಯಾಯವಾಗದಂತೆ ಇರುವ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಿದೆ. ಸಂಘರ್ಷಕ್ಕೆ ಅವಕಾಶ ಕೊಡದೆ ಕೇವಲ ರೈತರ ಹಿತ ಕಾಪಾಡುವುದು ನನ್ನ ಆಧ್ಯತೆಯಾಗಿದೆ ಎಂದರು.
ಕಡೂರು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿದರು.
  ಹಿರಿಯ ಕೃಷಿಕ ಎಚ್.ವಿ.ಗಿರೀಶ್ ಸಭಾಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಕೆ.ಎ.ಶಾಂತಪ್ಪ ಒಡೆಯರ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್, ಮರುಗುದ್ದಿ ಮನು,ಯಾಸೀನ್,ಗೋವಿಂದಪ್ಪ, ಮಂಜುನಾಥ್,  ಮುಖಂಡರಾದ ಕಂಸಾಗರ ಸೋಮಶೇಖರ್, ಆಸಂದಿ ಕಲ್ಲೇಶ್,ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಟಿ‌.ಆರ್.ರೇಣುಕಪ್ಪ,ಬೆಳ್ಳಿಗುತ್ತಿ ಚಂದ್ರಪ್ಪ,ಚನ್ನೇನಹಳ್ಳಿ ದಿವಾಕರ್, ದೊಣ್ಣೆಕೋರನಹಳ್ಳಿ ಉಮೇಶ್, ಅರೇಕಲ್ ಪ್ರಕಾಶ್, ತಿಪ್ಪೇಶ್, ಗುರುಮೂರ್ತಿ, ಎಂ.ಆರ್‌ಸೋಮಶೇಖರ್, ಬುಕ್ಕಸಾಗರ ಪ್ರಕಾಶ್ ಕುಮಾರ್ ಇದ್ದರು.

ಭದ್ರಾ ಉಪಕಣಿವೆ ಯೋಜನೆಯಲ್ಲಿ 1.45 ಟಿ.ಎಂ.ಸಿ.ನೀರು ಕಡೂರಿಗೆ ಮಂಜೂರಾಗಿದೆ. ಈ ನೀರು ನಮ್ಮ ಹಕ್ಕಿನದಾಗಿದ್ದು, ಕೆಲ ಕಾರಣಗಳಿಂದಾಗಿ ನಮ್ಮ ನೀರಿನಲ್ಲಿ ಚಿಕ್ಕಮಗಳೂರು ಮತ್ತು ತರೀಕೆರೆ ತಾಲ್ಲೂಕಿಗೆ ಸಹ ಪಾಲು ಹೋಗಿದೆಯೆಂಬುದು ವಿಪರ್ಯಾಸಕರ ಸಂಗತಿ.  ನಮಗೆ ಮಂಜೂರಾದ ನೀರು ಪೂರ್ಣ ಪ್ರಮಾಣದಲ್ಲಿ ದೊರೆತರೆ ತಾಲ್ಲೂಕಿನ ನೀರಾವರಿ ಸಮಸ್ಯೆ ಬಹುತೇಕ ದೂರವಾಗುತ್ತದೆ. ಹೆಬ್ಬೆ ಯೋಜನೆ ಮುಗಿದ ಅಧ್ಯಾಯವಲ್ಲ. ಅದನ್ನೂ ಸಹ ಮುಂದಿನ‌ ದಿನಗಳಲ್ಲಿ ಮತ್ತೆ ಮುನ್ನೆಲೆಗೆ ತರುವುದು ಖಚಿತ

– ಕೆ.ಎಸ್.ಆನಂದ್, ಶಾಸಕರು ಕಡೂರು.

Leave a Reply

Your email address will not be published. Required fields are marked *

error: Content is protected !!