ಮಠಗಳು ಭಕ್ತರ ದೇಣಿಗೆಯಿಂದ ನಿರ್ಮಾಣವಾಗಬೇಕಿದೆ – ಕಾಗಿನೆಲೆ ಶ್ರೀಗಳು

ಸುದ್ದಿ ಕಡೂರು: ಮಠಗಳು ಭಕ್ತರ ದೇಣಿಗೆಯಿಂದ ನಿರ್ಮಾಣವಾಗಬೇಕಿದೆ ಎಂದು ಕಾಗಿನೆಲೆ ಕನಕಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.

ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕನಕಗುರು ಪೀಠದ ಶಾಖಾ ಮಠಕ್ಕೆ ಅವಶ್ಯಕವಾದ ಮರದ ನಾಟ(ಕಟ್ಟಿಗೆ)ಯ ಖರೀದಿಗಾಗಿ ಸೋಮವಾರ ಪಟ್ಟಣಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಕುರುಬ ಸಮಾಜದ ವತಿಯಿಂದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿ, ಸಮಾಜದ ಅಭಿವೃದ್ದಿಗಾಗಿ ಮಠಗಳು ಕಾರ್ಯನಿರ್ವಹಿಸಲಿವೆ. ಕಾಗಿನೆಲೆ ಸಂಸ್ಥಾನವಾದಮೇಲೆ ಶಾಖಾ ಮಠಗಳು ಪ್ರಾರಂಭವಾದವು. ಬೆಳ್ಳೂಡಿಯ ಮಠವನ್ನು ಏಕವ್ಯಕ್ತಿ ಕಟ್ಟಿಸಲು ಮುಂದೆ ಬಂದಿದ್ದರು. ಮಠದಿಂದ ಗಟವಾಗಬಾರದು. ಗಟದಿಂದ ಮಠಬೆಳೆಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.
ಮಠಕ್ಕಾಗಿ ಈಗಾಗಲೇ ಹತ್ತಾರು ಕಡೆಗಳಲ್ಲಿ ಆಸ್ತಿಯನ್ನು ಮಾಡಲಾಗಿದೆ. ಈಗ ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಮಠಕ್ಕೆ ಕಡೂರಿನ ಮರ ಸೂಕ್ತ ಎಂದು ಪರಿಗಣಿಸಿ ಆಗಮಿಸಲಾಗಿದೆ. ಮರದ ಪೂರ್ಣವೆಚ್ಚವನ್ನು ಕಡೂರಿನ ಭಕ್ತರು ಭರಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಮಂದಿರ, ಮಸೀದಿ, ದೇವಾಲಯಗಳು, ಮಠಗಳು ಒಬ್ಬ ವ್ಯಕ್ತಿಯಿಂದ ನಿರ್ಮಾಣವಾಗಬಾರದು. ಪ್ರತಿಯೊಬ್ಬರ ಶ್ರಮದ ಹಣದಿಂದ ಧಾರ್ಮಿಕ ಭವನಗಳು ನಿರ್ಮಾಣವಾಗಬೇಕಿದೆ. ಆಗ ಆ ಭವನಗಳಿಗೆ ಶಕ್ತಿ ಬರಲಿದೆ. ಸಾರ್ವಜನಿಕರ ಹಣದಿಂದ ಮಂದಿರಗಳು ನಿರ್ಮಾಣವಾಗಬೇಕಿದೆ ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಾಗಿನೆಲೆ ಪೀಠದ ಶ್ರೀಗಳು ಸಮಾಜದ ಅಭಿವೃದ್ದಿಯ ಕಾಳಜಿಯಿಂದ ರಾಜ್ಯಾದ್ಯಂತ ಪ್ರವಾಸಕೈಗೊಂಡು ಎಲ್ಲರು ಮೆಚ್ಚುವಂತಹ ಕಾರ್ಯ ಮಾಡುತ್ತಿದ್ದಾರೆ. ಮೀಸಲಾತಿ ಹೋರಾಟದಲ್ಲಿ ಅವರ ಪಾದಯಾತ್ರೆ ವಿಶೇಷವಾಗಿತ್ತು. ಸಮಾಜದ ಹಿತಕ್ಕಾಗಿ ತಾಲ್ಲೂಕಿನ ಭಕ್ತರ ಸಹಕಾರ ಇರಲಿದೆ. 400 ಎಕರೆ ಕುರಿ ಗೋಮಾಳವಿದ್ದು, ಆ ಪ್ರದೇಶವನ್ನು ರಕ್ಷಣೆ ಮಾಡಲಾಗಿದೆ. ಸರಕಾರದ ಮೂಲಕ ಆ ಜಾಗದಲ್ಲಿ ಸಂಸ್ಕರಣಾ ಕೇಂದ್ರವನ್ನು ಮಾಡಬೇಕಿದೆ. ಕನಕರಾಯಗುಡ್ಡವು ಸುಮಾರು 9 ಎಕರೆ ಪ್ರದೇಶದಲ್ಲಿದ್ದು ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಈ ಪ್ರದೇಶವನ್ನು ಅಭಿವೃದ್ದಿಗೊಳಿಸಬೇಕಿದೆ. ಪಟ್ಟಣದಲ್ಲಿ ಅತಿಹೆಚ್ಚು ಸಮಾಜದವರಿದ್ದರೂ ಇತರೆ ಸಮಾಜದವರೊಂದಿಗೆ ಸೌರ್ಹಾದಯುತವಾಗಿ ಜೀವನ ನಡೆಸುತ್ತಿದ್ದಾರೆ ಎಂದರು
ಈ ಸಂದರ್ಭದಲ್ಲಿ ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಎಚ್.ಎ. ಪ್ರಸನ್ನ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಕರಿಬಡ್ಡೆ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್, ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್, ಕೆ.ಎಚ್. ಶಂಕರ್, ಯರದಕೆರೆ ರಾಜಪ್ಪ, ಚೇತನ್ ಕೆಂಪರಾಜ್, ಜಿ.ರೇವಣ್ಣ, ಕರಿಬಡ್ಡೆರಾಜು, ಗೋವಿಂದಪ್ಪ, ಕಂಸಾಗರರೇವಣ್ಣ, ಎಮ್ಮೆದೊಡ್ಡಿ ಸೋಮೇಶ್, ಚಂದ್ರಪ್ಪ, ಹುಚ್ಚಪ್ಪ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!