ಚಿಕ್ಕಬಾಸೂರಿನ ಸೋಬಾನೆ ಚೌಡಮ್ಮಗೆ ರಾಜ್ಯೋತ್ಸವ ಪ್ರಶಸ್ತಿ

ಸುದ್ದಿ ಕಡೂರು: ಕಡೂರು ತಾಲ್ಲೂಕಿನ  ಚಿಕ್ಕಬಾಸೂರು ಗ್ರಾಮದ  ಜಾನಪದ ಕಲಾವಿದೆ ಚೌಡಮ್ಮಗೆ ಈ ಬಾರಿಯ ರಾಜೋತ್ಸವ ಪ್ರಶಸ್ತಿ ಒಲಿದಿದೆ. ಬಾಲ್ಯದಿಂದಲೂ ತನ್ನ ತಾಯಿಯಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಹಾಡುತ್ತಾ, ರೈತಾಪಿ ಜೀವನದೊಂದಿಗೆ  ಬದುಕು ಕಟ್ಟಿಕೊಂಡಿದ್ದು, ಸೋಬಾನೆ ಚೌಡಮ್ಮ ಎಂದೇ ಈ ಭಾಗದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ.

ತಾಲೂಕಿನ ಚಿಕ್ಕಬಾಸೂರು ಗ್ರಾಮದ ಚೌಡಮ್ಮ  ತಮ್ಮ ಪತಿ ಬೇಲೂರಯ್ಯ( ಭೈರಪ್ಪ)ರ ಸಹಕಾರದಿಂದಾಗಿಜಾನಪದ ಕಲೆಯಲ್ಲಿ ತೊಡಗಿಸಿಕೊಂಡಿರುವ ಚೌಡಮ್ಮ ಅವರು ಸುತ್ತಮುತ್ತಲ‌ ಭಾಗದ ಗ್ರಾಮಗಳಲ್ಲಿ,‌ಮದುವೆ, ಶುಭ ಸಮಾರಂಭಗಳಲ್ಲಿ ಸೋಬಾನೆ ಪದ ಹಾಡುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ.

ಸೋಬಾನ ಪದಗಳ ಮೂಲಕ ಗ್ರಾಮೀಣ ಸಂಪ್ರದಾಯಗಳನ್ನು ನೆರವೇರಿಸುತ್ತಾ ಬಂದವರು. ಇವರ ಗಾಯನ ಪ್ರತಿಭೆಯನ್ನು ಗುರುತಿಸಿ ಭದ್ರಾವತಿ ಆಕಾಶವಾಣಿಯು ಬಿ ಗ್ರೇಡ್ ಕಲಾವಿದೆಯಾಗಿ ಮನ್ನಣೆ ನೀಡಿ ಅನೇಕಬಾರಿ ಇವರು ಹಾಡಿದ ಸೋಬಾನೆ ಪದಗಳನ್ನು ಪಸಾರ ಮಾಡಿದ್ದಾರೆ. ಅನಕ್ಷರಸ್ತೆಯಾಗಿದ್ದರೂ ಸಹ ತನ್ನ ಜ್ಞಾಪಕ ಶಕ್ತಿಯಿಂದಲೇ ನೂರಾರು ಪದಗಳನ್ನು ಕಟ್ಟಿ ಹಾಡುತ್ತಾ ಬಂದಿದ್ದಾರೆ. ಕೇವಲ ತಾವು ಈ ಕಲೆಯನ್ನು ಮೈಗೂಡಿಸಿಕೊಂಡಿದ್ದಲ್ಲದೆ ಅನೇಕ ಗ್ರಾಮೀಣ ಮಹಿಳೆಯರಿಗೂ ಸೋಬಾನ ಪದಗಳನ್ನು ಕಲಿಸುತ್ತಾ ಬಂದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಹಾಡುಗಾರಿಕೆಯನ್ನು ಇಲಾಖೆಯ ಗುರು ಶಿಷ್ಯ ಪರಂಪರೆ ಯೋಜನೆ ಅಡಿಯಲ್ಲಿ ತನ್ನ ಗ್ರಾಮದ ಸುತ್ತಮುತ್ತಲ ಅನೇಕ ಮಹಿಳೆಯರಿಗೆ ಸೋಬಾನೆ ಪದಗಳನ್ನು ಕಲಿಸುವ ಮೂಲಕ ಕಲೆಯ ಉಳಿವಿಗೆ ಶ್ರಮಿಸಿದ್ದಾರೆ. ಗ್ರಾಮೀಣ ಭಾಗದ ಈ ಜಾನಪದ ಕಲೆಯಲ್ಲಿ ಸೋಬಾನೆ ಪದಗಳು, ಬಿಸೋ ಕಲ್ಲಿನ ಪದ ಮುಂತಾದ ಈ ನೆಲದ ಸಂಸ್ಕೃತಿಯನ್ನು ಯುವಜನತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿ ಪರಿಚಯಿಸುವ ಮೂಲಕ ಅವರಲ್ಲಿ ಆಸಕ್ತಿಯನ್ನು ಬೆಳೆಸುವಲ್ಲಿ ಮುತುವರ್ಜಿ ವಹಿಸಿರುವ.  ಚೌಡಮ್ಮ ಅವರ ಕಲಾ ನೈಪುಣ್ಯವನ್ನು ಗಮನಿಸಿರುವ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿವೆ. 70 ರ ಇಳಿ ವಯಸ್ಸಿನಲ್ಲೂ ಸಹ ಕುಂದದ ಉತ್ಸಾಹ ಇವರದು. ಯುವ ಜನಾಂಗಕ್ಕೆ ಕಲೆಯ ಜೀವಂತಿಕೆಯನ್ನು ಉಳಿಸುತ್ತಿದ್ದಾರೆ‌.

 

ಸೋಬಾನೆಚೌಡಮ್ಮ

 

“ತನ್ನ ತಾಯಿಯ ಜೊತೆಗೂಡಿ ಕಲಿತ ಸೊಬಾನೆ ಪದಗಳು ಇಂದಿಗೂ ಉಳಿಸಿಕೊಂಡು ಬರಲಾಗಿದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂಬ ಮಹಾದಾಸೆ ಇದೆ. ಸುಮಾರು 200ಕ್ಕು ಅಧಿಕ ಸೋಬಾನೆ ಪದಗಳನ್ನು ಅನೇಕ ಶುಭ ಸಮಾರಂಭಗಳಲ್ಲಿ ಹಾಡಲಾಗಿದೆ.”

– ಚೌಡಮ್ಮ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಚಿಕ್ಕಬಾಸೂರು, ಕಡೂರು ತಾ.

Leave a Reply

Your email address will not be published. Required fields are marked *

error: Content is protected !!