ಕ್ಷೇತ್ರದ ಜಿಲ್ಲಾಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಗೆ ಪ್ರಸ್ತಾವನೆ – ಕೆ.ಎಸ್.ಆನಂದ್

ಸುದ್ದಿ ಕಡೂರು :ಕ್ಷೇತ್ರದ ವ್ಯಾಪ್ತಿಯಲ್ಲಿರುವ 121 ಕಿಲೋ ಮೀಟರ್‌ನಷ್ಟು ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿ ರಸ್ತೆಯನ್ನಾಗಿ ಪರಿವರ್ತಿಸಲು ಈಗಾಗಲೇ ಲೋಕೋಪಯೋಗಿ ಸಚಿವರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ 60 ಕೋಟಿ ರೂ ಅನುದಾನ ಬಿಡುಗಡೆಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಅಪೆಂಡಿಕ್ಸ್-ಇ ಶೀರ್ಷಿಕೆಯಡಿ ಮಂಜೂರಾಗಿರುವ 2 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಡೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ದಿಗಾಗಿ ಸುಮಾರು 15 ಕೋಟಿ ರೂ ಮಂಜೂರಾಗಿದ್ದು, ಈ ಅನುದಾನದಲ್ಲಿ ತಾಲ್ಲೂಕಿನ ಜೋಡಿಲಿಂಗದಹಳ್ಳಿಯಿಂದ ಬಂಜೇನಹಳ್ಳಿ, ಚೀಲನಹಳ್ಳಿ, ಮತಿಘಟ್ಟ, ಮಾಡಾಳು ಮಾರ್ಗವಾಗಿ ರಾಜ್ಯ ಹೆದ್ದಾರಿ 152ಕ್ಕೆ ಸೇರುವ 3.5 ಕಿ,ಮೀ ರಸೆಯನ್ನು 2 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಮುಂದುವರೆದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಯಾವ ಯಾವ ಕಾಮಗಾರಿಗೆ ಚಾಲನೆ :

ರಾಜ್ಯ ಹೆದ್ದಾರಿ 152ರಿಂದ ವೈಮಲ್ಲಾಪುರ, ವಿ.ಯರದಕೆರೆ ಕೆರೆಸಂತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸೇರುವ ರಸ್ತೆ ಕಾಮಗಾರಿಯು 3.50 ಕೋಟಿ ವೆಚ್ಚದಲ್ಲಿ ಸುಮಾರು 2.50 ಕಿ,ಮೀ ರಸ್ತೆ ಕಾಮಗಾರಿಯು ನಡೆಯಲಿದೆ. ರಾಜ್ಯ ಹೆದ್ದಾರಿ 152ರಿಂದ ಚಟ್ಟನಹಳ್ಳಿ, ಮಲ್ಲಾಘಟ್ಟ ಸೋಮನಹಳ್ಳಿ ಮಾರ್ಗವಾಗಿ ಬಿವೈಎಸ್‌ಎಸ್ ರಸ್ತೆಗೆ ಸೇರುವ ಆಯ್ದ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ 4.95 ಕೋಟಿ ರೂ ಮಂಜೂರಾಗಿದ್ದು, 7 ಕಿಮೀ ರಸ್ತೆ ಕಾಮಗಾರಿ ನಡೆಯಲಿದೆ. ಪಂಚನಹಳ್ಳಿ, ತಿಮ್ಲಾಪುರ ಮಾರ್ಗವಾಗಿ ಗರುಗದಹಳ್ಳಿ, ವನಭೋಗಿಹಳ್ಳಿ, ಸಣ್ಣೇನಹಳ್ಳಿಗೆ ಸೇರುವ ರಸ್ತೆ ಕಾಮಗಾರಿಗೆ 3.80 ಕೋಟಿ ಮಂಜೂರಾಗಿದ್ದು, 3. ಕಿ.ಮೀ ರಸ್ತೆ ಅಭಿವೃದ್ದಿಯಾಗಲಿದೆ ಎಂದರು.
ಬೀರೂರಿನಿಂದ ಯಗಟಿ ಮಾರ್ಗವಾಗಿ ಸಿಂಗಟಗೆರೆ, ಬಾಣಾವಾರ ರಸ್ತೆ ಕಾಮಗಾರಿಗೆ 20 ಕೋಟಿ ರೂ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿಯ ಹಂತದಲ್ಲಿದೆ. ಕಡೂರಿನಿಂದ 9ಕ್ರಾಸ್-ಮರವಂಜಿವರೆಗೆ ರಸ್ತೆ ಡಾಂಬರೀಕರಣವಾಗಲಿದ್ದು, ಕಡೂರಿನಿಂದ ಮಲ್ಲೇಶ್ವರದವರೆಗೆ ರಸ್ತೆ ಅಗಲೀಕರಣ ಅಭಿವೃದ್ದಿಗೆ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ.ಮಲ್ಲೇಶ್ವರ-ಪುರ ರಸ್ತೆ, ಎಮ್ಮೆದೊಡ್ಡಿ ರಸ್ತೆಗಳು ಸೇರಿದಂತೆ ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕ್ರಮವಹಿಸಲಾಗಿದ್ದು, ಗ್ರಾಮೀಣ ರಸ್ತೆಗಳ ಅಭಿವೃದ್ದಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಹಿಂದಿನ ಸರಕಾರದ ಕಾಮಗಾರಿಗಳಿಗೆ ನೀಡಬೇಕಾದ ಅನುದಾನದ ಜೊತೆಗೆ ಹೊಸ ಕಾಮಗಾರಿಗಳಿಗೂ ಆದ್ಯತೆ ನೀಡುವ ಮೂಲಕ ರಾಜ್ಯ ಸರಕಾರ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಹಲವು ರಸ್ತೆಗಳು ಸುಧಾರಣೆಯಾಗಬೇಕೆಂಬ ಉದ್ದೇಶದಿಂದ ರಸ್ತೆಗಳ ಅಭಿವೃದ್ದಿ ಕಾರ್ಯಗಳಿಗೆ ಅನುದಾನವನ್ನು ತರುವ ಮೂಲಕ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮತಿಘಟ್ಟ ಗ್ರಾಪಂ ಅಧ್ಯಕ್ಷ ರೇವಣ್ಣ, ಸದಸ್ಯ ಶ್ರೀಕಂಠಒಡೆಯರ್, ಕರಿಬಡ್ಡೆ ಶ್ರೀನಿವಾಸ್, ಕುಬೇರಪ್ಪ, ಎಲ್.ಎಂ.ಪರಮೇಶ್ವರಪ್ಪ, ಎಂ.ಆರ್.ಟಿ. ಸುರೇಶ್, ಡಿ.ಉಮೇಶ್, ಹೋಚಿಹಳ್ಳಿ ಭೋಗಪ್ಪ, ಯರದಕೆರೆಓಂಕಾರ್, ವಸಂತಕುಮಾರ್, ರಾಕೇಶ್, ವಿನಯ್, ಶಶಿಕುಮಾರ್, ಸತೀಶ್‌ನಾಯ್ಕ, ಕುಮಾರ್, ಕೃಷ್ಣಮೂರ್ತಿ, ಪಿಡ್ಲ್ಯೂಡಿ ಎಇಇ ಬಸವರಾಜ್‌ನಾಯ್ಕ್, ಅಭಿಯಂತರರಾದ ಗಿರೀಶ್, ರಾಕೇಶ್, ಗುತ್ತಿಗೆದಾರ ಹಾಲಪ್ಪ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!