ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾಕಾರಂಜಿ ಸಹಕಾರಿ – ಜಿಗಣೇಹಳ್ಳಿ ನೀಲಕಂಠಪ್ಪ

ಸುದ್ದಿಕಡೂರು : ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾಕಾರಂಜಿ ವೇದಿಕೆಗಳು ಸಹಕಾರಿಯಾಗಲಿದೆ ಎಂದು ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಅಭಿಪ್ರಾಯಿಸಿದರು.
ತಾಲ್ಲೂಕಿನ ಜಿಗಣೇಹಳ್ಳಿ ಗ್ರಾಮದಲ್ಲಿ  ನಡೆದ ಬೀರೂರು ಶೈಕ್ಷಣಿಕ ವಲಯದ ದೊಡ್ಡಪಟ್ಟಣಗೆರೆ ಕ್ಲಸ್ಟರ್ ಮಟ್ಟದ ಸರ್ಕಾರಿ ಹಿರಿಯ- ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀ ಮಕ್ಕಳಲ್ಲಿ ವಿಶೇಷ ಎನಿಸಬಹುದಾದ ಪ್ರತಿಭೆ ಅಂತರ್ಗತವಾಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಿಗೆ ಓದಿನಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಕ್ರೀಡೆ,  ಸಾಂಸ್ಕೃತಿಕ ವಿದ್ಯೆಯಲ್ಲಿ ರಾಷ್ಟ್ರಮಟ್ಟದ ಸಾದನೆ ಮಾಡಿದವರ ದೊಡ್ಡ ಪಟ್ಟಿಯೇ ನಮ್ಮ ತಾಲ್ಲೂಕಿನಲ್ಲಿದೆ. ಅಂತಹವರ ಸಾಲಿಗೆ ಈ ಪ್ರತಿಭೆಗಳೂ ಸೇರುವಂತಹ ಸಾಧನೆ ಮಾಡಬೇಕಿದೆ.  ಅವರಲ್ಲಿನ ಪ್ರತಿಭೆ ಪ್ರಕಾಶನಗೊಂಡು ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರುವಂತಾಗಲಿ, ಈ ಹಿಂದೆ ಬೆಳ್ಳಿಪ್ರಕಾಶ್ ಅವರು ಈ ಶಾಲೆಯ ಅಭಿವೃದ್ಧಿಗೆ ಮತ್ತು ಗ್ರಾಮಕ್ಕೆ  ಬಹಳಷ್ಟು ಅನುದಾನ ನೀಡಿ ಸಹಕರಿಸಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದರು.
ಗ್ರಾಮದ ಮುಖಂಡ ಜಿಗಣೇಹಳ್ಳಿ ಉಮೇಶ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ  ಹೆಚ್ಚಿನ ಆಸಕ್ತಿ ಹೊಂದಿದ್ದು, ರಾಜ್ಯಮಟ್ಟದಲ್ಲಿ ನಮ್ಮ ಶಾಲೆಯನ್ನು ಪ್ರತಿನಿಧಿಸುವ ಅವಕಾಶ ದೊರಕಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ
ಭೈರೇಗೌಡ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್,  ಪ್ರೇಮ್ ಕುಮಾರ್, ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಂದ್ರ, ಗ್ರಾಮದ ಗುಡಿಗೌಡರಾದ ರಾಜಪ್ಪ, ಭೈರಪ್ಪ, ಮುಳ್ಳಪ್ಪ, ಎಂ.ಮೈಲಾರಪ್ಪ, ಬಸಪ್ಪ, ಬಿ.ಟಿ.ಅಜ್ಜಯ್ಯ, ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!