ಪಶುಸಖಿಯರಿಗೆ ಶಾಸಕರಿಂದ ಪಶುಕಿಟ್‌ ವಿತರಣೆ

ಸುದ್ದಿ ಕಡೂರು : ಪಶು ಪಾಲನ ಇಲಾಖೆಯಡಿಯಲ್ಲಿ ರಾಜ್ಯ ಸರ್ಕಾರ ನೇಮಿಸಿರುವ ಪಶುಸಖಿಯರು ಪಶು ಇಲಾಖೆ ಮತ್ತು ರೈತರ ಮಧ್ಯೆ ಕಾರ್ಯನಿರ್ವಹಿಸಿ ಪಶು ಇಲಾಖೆಯ ಸೌಲಭ್ಯಗಳು ಮತ್ತಿತರ ಮಾಹಿತಿ ನೀಡಲಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಶಾಸಕರ ಜನಸ್ನೇಹಿ ಕಚೇರಿಯಲ್ಲಿ ಗುರುವಾರ ಪಶು ಇಲಾಖೆ ಹಾಗೂ ಎನ್‌ಆರ್‌ಎಲ್‌ಎಂ(ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ) ನಿರ್ದೇಶಕರು ಆಯೋಜಿಸಿದ್ದ ಪಶುಸಖಿಯರಿಗೆ ಉಚಿತ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ  ಕಿಟ್‌ವಿತರಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯರಂತೆ ಪಶು ಇಲಾಖೆಯು ಪಶುಸಖಿಯರನ್ನು ಕ್ಷೇತ್ರದ 49 ಗ್ರಾಮ ಪಂಚಾಯಿತಿಗಳಿಗೆ ಒಬ್ಬರಂತೆ ತಾಲೂಕಿನಲ್ಲಿ 60 ಗ್ರಾ.ಪಂ.ಗಳಿಗೆ ಪಶುಸಖಿಯರನ್ನು ನೇಮಕಮಾಡಿಕೊಂಡಿದ್ದು. ಇವರುಗಳು ಮುಖ್ಯವಾಗಿ ಗ್ರಾಮೀಣ ಪಶು ಆಸ್ಪತ್ರೆಗಳಲ್ಲಿನ ಪಶು ವೈದ್ಯರೊಂದಿಗೆ ಗ್ರಾಮಗಳಲ್ಲಿನ ಪಶುಗಳಿಗೆ ಹಾಗೂ ಹೈನುಗಾರಿಕೆ ಮಾಡುವ ರೈತರನ್ನು ಗುರುತಿಸಿ ಪಶು ಇಲಾಖೆ ನೀಡುವ ಸೌಲಭ್ಯಗಳನ್ನು ರೈತರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಿದ್ದಾರೆ.

ಗ್ರಾಮಗಳಲ್ಲಿ ಕೋಳಿ,ಕುರಿ ಸಾಕಾಣಿಕೆ ಮಾಡುವವರನ್ನು ಸಹ ಗುರುತಿಸಿ ಕುರಿಗಳಿಗೆ ಆರೋಗ್ಯ ಆಥವಾ ಯಾವುದೇ ಸಿಡಿಲು ಬಡಿಯುವಂತಹ ಅವಘಡಗಳು ಕಂಡು ಬಂದಾಗ ಇಲಾಖೆಗೆ ಮಾಹಿತಿ ನೀಡಿ ಇಲಾಖೆಯಿಂದ ಪರಿಹಾರ ನೀಡಲು ಇವರುಗಳು ಶ್ರಮಿಸಲಿದ್ದಾರೆ.

ರೈತರು ಪಶುಸಖಿಯರು ನೀಡುವ ಮಾಹಿತಿಗಳನ್ನು ಕಾಲ ಕಾಲಕ್ಕೆ ಪಡೆದು ಸೌಲಭ್ಯಗಳನ್ನು ಪಡೆಯಿರಿ ಎಂದು ಶಾಸಕರು ರೈತರಿಗೆ ಕರೆ ನೀಡಿದರು.

ಕ್ಷೇತ್ರದಲ್ಲಿ ಪಶು ಆಸ್ಪತ್ರೆಗಳಲ್ಲಿ ಉತ್ತಮವಾಗಿ ಸೌಲಭ್ಯಗಳು ದೊರೆಯುತ್ತಿದ್ದು ಇದರ ಸದುಪಯೋಗವನ್ನು ಪಡೆಯಿರಿ ಜೊತೆಗೆ ದನಕರುಗಳ ವಿಷಯದಲ್ಲಿ ಇಲಾಖೆ ಹಾಗೂ ರೈತರು ಮುಂಜಾಗೃತರಾಗಿರಬೇಕೆಂದು ಸಲಹೆ ನೀಡಿದರು.

ತಾಲೂಕು ಪಶು ಪಾಲನ ಇಲಾಖೆಯ ಉಪ ನಿರ್ದೇಶಕರಾದ ಡಾ.ಉಮೆಶ್ ಮಾತನಾಡಿ ಪಶು ಸಖಿಯರನ್ನು ರಾಜ್ಯ ಸರ್ಕಾರ ನೇಮಕ ಮಾಡಿಕೊಂಡಿದ್ದು ಇಲಾಖೆ ಎನ್‌ಆರ್‌ಎಲ್‌ಎಂ ಯೋಜನೆಯ ಮುಖಾಂತರ ಕೆಲಸವನ್ನು ಪಡೆಯಲಿದೆ.ಪಶು ಸಖಿಯರು ಪಶುಗಳ ಬಗ್ಗೆ ಮಾಹಿತಿ ಪಡೆದು ಇಲಾಖೆಯಿಂದ ಸೌಲಭ್ಯ ಕೊಡಿಸಲು ಮುಂದಾಗಲಿದ್ದಾರೆ ಪ್ರತಿಯೋರ್ವ ಪಶು ಸಖಿಯರಿಗೆ ಇಲಾಖೆ 3000 ಸಾವಿರ ಗೌರವ ಧನ ನೀಡಲಿದ್ದು.ಇದೀಗ ಶಾಸಕರಿಂದ ಉಚಿತವಾಗಿ ಪಶು ಕಿಟ್ ನೀಡಿದ್ದು ಇವುಗಳಲ್ಲಿ ಪಶು ಇಲಾಖೆಗೆ ಸಂಬಂಧಿಸಿದ ಪರಿಕರಗಳು ಇರಲಿದೆ.ಇವುಗಳ ಬಳಕೆಯ ಬಗ್ಗೆ ಈಗಾಗಲೇ ಎನ್‌ಆರ್‌ಎಲ್‌ಎಂ ಮಾಹಿತಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಕಿರಣ್‌ಕುಮಾರ್,ಎನ್‌ಆರ್‌ಎಲ್‌ಎಂ ಕಾರ್ಯಕ್ರಮದ ವ್ಯವಸ್ಥಾಪಕ ನಂದಕುಮಾರ್,ವ್ಯವಸ್ಥಾಪಕರಾದ ಐ.ಎಸ್.ಪ್ರದೀಪ್,ಲೋಕೆಶ್ ಮತ್ತು ದೀಪಿಕಾ ಹಾಗೂ ಪಶು ಸಖಿಯರು ಇದ್ದರು.

Leave a Reply

Your email address will not be published. Required fields are marked *

error: Content is protected !!