ಮನುಷ್ಯ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಶಿಕ್ಷಣ ಅತ್ಯಗತ್ಯವಾಗಲಿದೆ – ಭಂಡಾರಿಶ್ರೀನಿವಾಸ್

ಸುದ್ದಿ ಕಡೂರು : ವಿದ್ಯಾರ್ಥಿಗಳು ಉತ್ತಮ ಅಂಕಗಳಿಕೆಯ ಜೊತೆಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಂಡು ಕನ್ನಡ ಸಾಹಿತ್ಯ ಹಾಗೂ ಪರಂಪರೆಯ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ನಾಡು-ನುಡಿಯ ಬಗ್ಗೆ ಗೌರವ ಮನೋಭಾವನೆ ಹೊಂದಬೇಕಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಕಸಾಪ ತಾಲ್ಲೂಕು ಘಟಕ ಮತ್ತು ಮಹಿಳಾ ಘಟಕದ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಲಾಗಿದ್ದ ಗುರುವಂದನೆ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಮನುಷ್ಯ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಶಿಕ್ಷಣ ಅತ್ಯಗತ್ಯವಾಗಲಿದೆ. ಇದಕ್ಕೆ ಗುರುಗಳ ಪ್ರೋತ್ಸಾಹವು ಅತಿಮುಖ್ಯವಾಗಲಿದೆ. ಶಿಕ್ಷಣದಿಂದ ಯಾರು ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಇತರೆ ವಿಷಯಗಳ ಪೈಪೋಟಿಯ ನಡುವೆಯೂ ಕನ್ನಡದ ವಿಷಯದಲ್ಲಿ ಪೂರ್ಣ ಪ್ರಮಾಣದ ಅಂಕಗಳಿಸಿರುವುದು ಹೆಮ್ಮೆಯ ಸಂಗತಿ. ಈ ಹಿನ್ನಲೆಯಲ್ಲಿ ಕಸಾಪ ಘಟಕಗಳು ಮಕ್ಕಳನ್ನು ಪುರಸ್ಕರಿಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಕನ್ನಡ ಸಾಹಿತ್ಯಕ್ಕೆ ಏಂಟು ಜ್ಞಾನಪೀಠ ಪ್ರಶಸ್ತಿಗಳನ್ನು ನೀಡುವ ಮೂಲಕ ಕನ್ನಡಭಾಷೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ನಮ್ಮ ಸಾಹಿತಿಗಳಗಿಎ ಸಲ್ಲುತ್ತದೆ. ಸಾಹಿತಿಗಳು ಸಮಾಜದ ಓರೆಕೋರೆಗಳನ್ನು ತಿದ್ದುವ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಮಾತನಾಡಿ, ಪರಿಷತ್ ವತಿಯಿಂದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಕಾರ್ಯ ಮಾಡಲಾಗುತ್ತಿದೆ. ಜೊತೆಯಲ್ಲಿ ಗುರುಗಳನ್ನು ಗೌರವಿಸುವ ಪದ್ದತಿಯನ್ನು ಮುಂದುವರೆಸಲಾಗುತ್ತಿದೆ. ಕಸಾಪದ ಎಲ್ಲಾ ವಿಭಾಗದ ಘಟಕಗಳು ನಾಡು ನುಡಿಯ ಸೇವೆಯ ಜೊತೆಯಲ್ಲಿ ಕನ್ನಡತನವನ್ನು ಗಟ್ಟಿಗೊಳಿಸಲು ಕ್ರೀಯಾಶೀಲವಾಗಿ ತೊಡಗಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕರಾದ ಎಸ್.ವಿ.ಮರುಳಸಿದ್ದಪ್ಪ, ಎಚ್.ಮಲ್ಲಮ್ಮ, ನಿಂಗಪ್ಪ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸವಿತಾಸತ್ಯನಾರಾಯಣ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕಿ ಪದ್ಮಕ್ಕ, ಲತಾರಾಜಶೇಖರ್, ಬಿ.ಚಂದ್ರುಶೇಖರ್, ಪ್ರಸನ್ನ, ಕುಪ್ಪಾಳುಶಾಂತಮೂರ್ತಿ, ವಡೇರಹಳ್ಳಿ ಅಶೋಕ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!