ಕಡೂರು ಕ್ಷೇತ್ರಕ್ಕೆ ಎಚ್‌ಡಿ ದೇವೇಗೌಡರ ರಾಜ್ಯಸಭಾ ನಿಧಿಯಿಂದ 1ಕೋಟಿ ಬಿಡುಗಡೆ- ವೈ.ಎಸ್.ವಿ. ದತ್ತ

ಸುದ್ದಿ ಕಡೂರು : ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅನುದಾನದಡಿ ಒಂದು ಕೋಟಿ ರೂ ಅನುದಾನವನ್ನು ಕಡೂರು ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರಿ ಕಡೂರು ಕ್ಷೇತ್ರದ ಬಗ್ಗೆ ವಿಶೇಷವಾದ ಕಾಳಜಿ ಮತ್ತು ಅಭಿಮಾನದ ಪೂರಕವಾಗಿ ಅನುದಾನವನ್ನು ನೀಡಿದ್ದು, ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಕಡೂರು ಕ್ಷೇತ್ರಕ್ಕೆ 2 ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಜಿಲ್ಲಾಡಳಿತಕ್ಕೆ ಹಣ ಬರಬೇಕಿದೆ. ರಾಜ್ಯ ಸಭಾ ಸದಸ್ಯರು ನೀಡಿರುವ ಅನುದಾನದಲ್ಲಿ ತಾವು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಪೂರ್ಣಗೊಳ್ಳದ ಕೆಲವು ಸಮುದಾಯಭವನಗಳಿಗೆ ಅನುದಾನವನ್ನು ನೀಡಲಾಗುತ್ತದೆ ಎಂದರು.
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬರಗಾಲವಿದ್ದು ಕಡೂರು ಕ್ಷೇತ್ರವನ್ನು ಬರಗಾಲ ಪ್ರದೇಶವೆಂದು ಘೋಷಿಸಲಾಗಿದೆ. ಸರಕಾರ ಕುಡಿಯುವ ನೀರಿಗೆ ಹಾಗೂ ಮೇವಿಗೆ ಹಣ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುತ್ತಾರೆ. ಸರಕಾರ ಕೂಡಲೇ ಬರಪರಿಹಾರದ ಹಣನೀಡಬೇಕಿದೆ. ಇದುವರೆಗೂ ಯಾವುದೇ ನಯಾಪೈಸೆ ಹಣ ಬಿಡುಗಡೆಯಾಗಿರುವುದಿಲ್ಲ. ಕೇಂದ್ರ ಸರಕಾರಕ್ಕೆ ಬರಪರಿಹಾರದ ಹಣವನ್ನು ಕೇಳಲಾಗಿದೆ. ಆದರೆ ಕೇಂದ್ರ ಸರಕಾರ ಹಣ ನೀಡಿರುವುದಿಲ್ಲ ಎಂದು ರಾಜ್ಯ ಸರಕಾರ ತಿಳಿಸುತ್ತದೆ. ಕನಿಷ್ಟ ರಾಜ್ಯ ಸರಕಾರವಾದರೂ ಬರಪರಿಹಾರದ ಹಣ ನೀಡದೆ ವಿಳಂಬಧೋರಣೆ ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
  ಕಡೂರು ತಾಲ್ಲೂಕಿನಲ್ಲಿ ಮೂರು ದಿನ ಸುರಿದ ಮಳೆಯಿಂದ ಹಲವಾರು ಸಣ್ಣಪುಟ್ಟ ಕೆರೆಗಳಲ್ಲಿ ನೀರು ಕಂಡಿದ್ದರೂ ಸಮರ್ಪಕವಾಗಿ ಕೆರೆಗಳು ತುಂಬಿಲ್ಲ. ಆದರೆ ರೈತರಿಗೆ ಬರಗಾಲದ ಬಿಸಿ ಇನ್ನು ತಟ್ಟಿಲ್ಲ. ಅಂತರ್ಜಲ ಕುಸಿದಿಲ್ಲ. ಬೋರ್‌ವೆಲ್‌ಗಳಲ್ಲಿ ನೀರು ದೊರೆಯುತ್ತಿದೆ. ಸರಕಾರ ನಿರಂತರವಾಗಿ 5ಗಂಟೆ ರೈತರಿಗೆ ವಿದ್ಯುತ್ ನೀಡಬೇಕಿದೆ. ಯಾವ ಸಂದರ್ಭದಲ್ಲಿ ವಿದ್ಯುತ್ ನೀಡುತ್ತೇವೆ ಎಂಬುದನ್ನು ತಿಳಿಸುತ್ತಿಲ್ಲ. ರೈತರು ಮಾತ್ರ ಇಡೀ ರಾತ್ರಿ ವಿದ್ಯುತ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ರೈತರ ಜಮೀನುಗಳಿಗೆ ಯಾವಾಗ ಎಷ್ಟು ಗಂಟೆ ವಿದ್ಯುತ್‌ನ್ನು ನೀಡುತ್ತೇವೆ ಎಂಬುದನ್ನು ಪ್ರಕಟಣೆಯಲ್ಲಿ ತಿಳಿಸುವ ಕಾರ್ಯವನ್ನು ಮೆಸ್ಕಾಂ ಅಧಿಕಾರಿಗಳು ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಾಸನ ಹಾಲುಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಮಚ್ಚೇರಿ ಮಹೇಶ್, ಪಿ.ಸಿಗಂಗಾಧರ, ಬಿಳುವಾಲ ಕೃಷ್ಣಮೂರ್ತಿ, ಹರ್ಷ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!