ತ್ರಿಸೂತ್ರಗಳನ್ನು ನಮಗೆ ನೀಡಿದ ಮಹಾನ್ ಚೇತನದ ಶಕ್ತಿ ಅಂಬೇಡ್ಕರ್ – ಕೆ.ಆರ್. ಮಹೇಶ್ ಒಡೆಯರ್

ಸುದ್ದಿ ಕಡೂರು: ಸಂಘಟನೆ,ಶಿಕ್ಷಣ ಮತ್ತು ಹೋರಾಟ ಎಂಬ ತ್ರಿಸೂತ್ರಗಳನ್ನು ನಮಗೆ ನೀಡಿದ ಮಹಾನ್ ಚೇತನದ ಶಕ್ತಿ ಅಂಬೇಡ್ಕರ್ ಅವರು ಎಂದು ಜಿಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಬಣ್ಣಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಅಂಬೇಡ್ಕರ್ ಪ್ರತಿಮೆಯ ಬಳಿ  ಕರ್ನಾಟಕ ಬ್ಲ್ಯೂ ಆರ್ಮಿ  ಸಂಘಟನೆ ಮತ್ತು ಸಮಾನ ಮನಸ್ಕರ ಬಳಗದ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ಅಂಗವಾಗಿ ದೀಪ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ನಾವೆಲ್ಲ ಅಂಬೇಡ್ಕರ್ ನೀಡಿದ ಮೀಸಲಾತಿಯೊಳಗಿದ್ದೇವೆ. ಅದಕ್ಕಿಂತ ಹೆಚ್ಚಾಗಿ ನಾವೆಲ್ಲ ಅಂಬೇಡ್ಕರ್ ವಾದದಲ್ಲಿರಬೇಕಿದೆ. ಸಂಘಟನೆ, ಶಿಕ್ಷಣ ಮತ್ತು ಹೋರಾಟದ ಮೂಲಕ ನಮ್ಮ ಹಕ್ಕನ್ನು ನಾವು ಪಡೆಯಬೇಕೆಂಬ ಆಶಯವನ್ನು  ಅಂಬೇಡ್ಕರ್ ಅವರು ಸದಾ ಪ್ರತಿಪಾದಿಸುತ್ತಿದ್ದರು. ಅದು ಸಾಕಾರವಾಗಬೇಕಿದೆ ಎಂದರು. ಬ್ಲೂ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಪ್ರತಿಯೊಬ್ಬರೂ ಸಮಾನತೆಯಿಂದ ಇರಬೇಕು, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕೆಂಬ ಆಶಯ ಅವರದ್ದಾಗಿತ್ತು. ಸ್ವತಃ ಅಪಮಾನವನ್ನೆದುರಿಸಿ ಅವೆಲ್ಲವನ್ನೂ  ಮೆಟ್ಟಿ ನಿಂತು ಭಾರತ ದೇಶಕ್ಕೆ ಸಂವಿಧಾನ ಬರೆದು ವಿಶ್ವಮನ್ನಣೆ ಪಡೆದ ಮಹಾನ್ ಚೇತನ ಅಂಬೇಡ್ಕರ್ ಎಂದರು. ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಅಂಬೇಡ್ಕರ್ ಅವರಿಂದಾಗಿಯೇ ಶೋಷಿತ ವರ್ಗಕ್ಕೆ ಧ್ವನಿ ದೊರೆಯಿತು. ದೇಶದ ಅತ್ಯುನ್ನತ ಹುದ್ದೆಗೆ ಜನಸಾಮಾನ್ಯನೂ ಏರಬಲ್ಲ ಎಂದರೆ ಅದು ಅಂಬೇಡ್ಕರ್ ರಚಿಸಿದ ಸಂವಿಧಾನದ ಸೊಬಗು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ  ತಂಗಲಿ ರಾಘವೇಂದ್ರ, ಹುಲ್ಲೇಹಳ್ಳಿಲಕ್ಷ್ಮಣ,  ಕೆ.ವೈ.ವಾಸು, ಕಿರಣ್ ಕದಂ, ಕಡೂರಹಳ್ಳಿ ಪ್ರಶಾಂತ್, ಶ್ರೀನಿವಾಸ್ ನಾಯ್ಕ ಹಾಗೂ  ದಲಿತ ಸಂಘಟನೆಗಳ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!