ಮಚ್ಚೇರಿಯ ಮಾಜಿ ಯೋಧನ ಖಾತೆಗೆ ಕನ್ನ!

ಸುದ್ದಿ ಕಡೂರು : ತಾಲ್ಲೂಕಿನ ಮಚ್ಚೇರಿ ಗ್ರಾಮದ ಮಾಜಿ ಯೋಧರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 74 ಸಾವಿರ ಪಿಂಚೂಣಿ ಹಣವನ್ನು ವಂಚಕರು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಚ್ಚೇರಿ ಗ್ರಾಮದ ಎಂ.ಎನ್.ಎಂ.ಪ್ರಕಾಶ್ ವಂಚನೆಗೊಳಗಾದ ಮಾಜಿ ಯೋಧನಾಗಿದ್ದು, ಕಡೂರು ಪಟ್ಟಣದ ಎಸ್.ಬಿ.ಐ. ಬ್ಯಾಂಕ್ ಶಾಖೆಯಲ್ಲಿ ಪೆನ್ಷನ್ ಖಾತೆ ಹೊಂದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬ್ಯಾಂಕ್ ಖಾತೆಯಲ್ಲಿ ವ್ಯವಹಾರ ಮಾಡಿರಲಿಲ್ಲ. ಎರಡು ದಿನಗಳ ಹಿಂದೆ ಬ್ಯಾಂಕಿಗೆ ಹೋದ ಸಂದರ್ಭದಲ್ಲಿ ಖಾತೆಯಲ್ಲಿದ್ದ ಹಣ ಪರಿಶೀಲಿಸಿದಾಗ ಮೂರು ತಿಂಗಳ ಅವಧಿಯಲ್ಲಿ ಒಮ್ಮೆ 10 ಸಾವಿರ, ಐದು ಸಾವಿರ ಹೀಗೆ ಹಲವಾರು ಬಾರಿ ಹಣ ಖಾತೆಯಿಂದ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಹಣವನ್ನು ರಾಜ್ಯದಿಂದ ಹೊರಗೆ ಡ್ರಾ ಮಾಡಲಾಗಿದೆ.ಯಾವ ರಾಜ್ಯದಲ್ಲಿ ಎಂಬುದು ಸ್ಪಷ್ಟವಾಗಿಲ್ಲ. ಬಹುತೇಕ ಮಹಾರಾಷ್ಟ್ರದಲ್ಲಿ ಹಣ ತೆಗೆದಿರಬಹುದು. ಆದರೆ ನಿಖರವಾಗಿ ಯಾವ ಖಾತೆಗೆ ಹಣ ಪಾವತಿಯಾಗಿದೆ ಎಂಬುದನ್ನು ತಿಳಿಯಲು ಬ್ಯಾಂಕಿನವರಿಗೇ ತಿಳಿಯಲಾಗುತ್ತಿಲ್ಲ. ನೇರವಾಗಿ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸಿಲ್ಲ. ಬದಲಾಗಿ ಬೆರಳಚ್ಚು ಧೃಢೀಕರಣದ ಮೂಲಕ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಬ್ಯಾಂಕಿನ ತಾಂತ್ರಿಕ ವಿಭಾಗದವರು ಇದನ್ನು ಪತ್ತೆಹಚ್ಚಲು ಕೆಲದಿನಗಳು ಬೇಕಿವೆ ಎಂದು ಬ್ಯಾಂಕ್ ವ್ಯವಸ್ಥಾಪಕ ಕರಣ್ ಗಾಂವ್ಕರ್ ತಿಳಿಸಿದ್ದಾರೆ.
ತಾವು ಎಲ್ಲಿಯೂ ಹಣವನ್ನು ಡ್ರಾ ಮಾಡಿಲ್ಲ. ಮೊದಲಿಗೆ ನನ್ನ ಬಳಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲ, ಪ್ರತಿ ತಿಂಗಳು ಪೆನ್ಷನ್ ಹಣ ಖಾತೆಗೆ ಬರುತ್ತದೆ. ಮೂರ್ನಾಲ್ಕು ತಿಂಗಳಿಗೊಮ್ಮೆ ಹಣ ಡ್ರಾ ಮಾಡಿಕೊಳ್ಳುತ್ತಿದ್ದೆ. ಈಗ ಈ ರೀತಿ ವಂಚನೆ ನಡೆದಿದೆ ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಮಾಜಿ ಯೋಧ ಎಂ.ಎನ್.ಎಂ.ಪ್ರಕಾಶ್ ತಿಳಿಸಿದರು. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!