ಮಲ್ಲೇಶ್ವರದ ಬೈಪಾಸ್‌ ರಸ್ತೆಯ ತೋಟದಲ್ಲಿದ್ದ 31 ಕುರಿಮರಿಗಳ ಬಲಿಪಡೆದ ಚಿರತೆ!

ಸುದ್ದಿಕಡೂರು : ಪಟ್ಟಣದ ಹೊರವಲಯದ ಮಲ್ಲೇಶ್ವರದ ಬೈಪಾಸ್ ರಸ್ತೆ ಬದಿಯಲ್ಲಿರುವ ತೋಟದಲ್ಲಿ ಸಾಕಾಣಿಕೆಗಾಗಿ ಬೀಡುಬಿಟ್ಟಿದ್ದ ಮೇಕೆ ಮತ್ತು ಕುರಿ ಮರಿಗಳಿಗೆ ಚಿರತೆದಾಳಿಯಿಂದಾಗಿ 31 ಮರಿಗಳು ಗುರುವಾರ ಸಾವನ್ನಪ್ಪಿವೆ.

ಕಡೂರು ಪಟ್ಟಣದ ನಿವಾಸಿ ಚಂದ್ರುಶೇಖರ್, ಬಸವರಾಜ್, ಮಂಜು ಹಾಗೂ ಲಕ್ಷ್ಮಣ ಎಂಬುವವರಿಗೆ ಸೇರಿದ ಕುರಿ ಹಾಗೂ ಮೇಕೆ 50ಕ್ಕು ಹೆಚ್ಚು ಮರಿಗಳನ್ನು ತೋಟದ ಬಳಿ ಸಾಕಾಣಿಕೆಗಾಗಿ ಕುರಿದೊಡ್ಡಿಯಲ್ಲಿ ಬೀಡುಬಿಟ್ಟಿದ್ದರು. ತೋಟದಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಏಕಾಏಕಿ ತಂತಿಯ ಬಲೆಯಿಂದ ಹಾರಿ ಸುಮಾರು 3 ತಿಂಗಳು ಅಧಿಕ ಬೆಳವಣಿಗೆಯಾಗಿರುವ ಮರಿಗಳ ಮೇಲೆ ದಾಳಿ ನಡೆಸಿದ್ದು, ಮರಿಗಳು ಚದುರಿಹೋಗದಂತೆ ತಂತಿಯ ಬಲೆ ಹಾಕಿದ ಪರಿಣಾಮ ಬಹುತೇಕ ಮರಿಗಳು ಸಾಮೂಹಿಕವಾಗಿ ಚಿರತೆಯ ದಾಳಿಗೆ ಸಿಲುಕಿಗೆ ಮೃತಪಟ್ಟಿವೆ.

ಶುಕ್ರವಾರ ಸ್ಥಳಕ್ಕೆ ಪಶುವೈದ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮೃತಪಟ್ಟ ಕುರಿ(17) ಹಾಗೂ ಮೇಕೆ(14) ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದಾಳಿಯಿಂದ ಗಾಯಗೊಂಡಿದ್ದ ಕೆಲ ಮರಿಗಳಿಗೆ ಸ್ಥಳದಲ್ಲಿಯೇ ಪಶುವೈದ್ಯರು ಚಿಕಿತ್ಸೆ ನೀಡಿ ಹಾರೈಕೆ ಮಾಡಿದರು.

ಬಳಿಕ ಪುರಸಭಾ ಸದಸ್ಯ ಭಂಡಾರಿಶ್ರೀನಿವಾಸ್ ಮಾತನಾಡಿ, ಮರಿಗಳ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದ ರೈತರಿಗೆ ಏಕಾಏಕಿ ಬೆಳವಣಿಗೆಯ ಹಂತದಲ್ಲಿದ್ದ ಸುಮಾರು 3 ಲಕ್ಷ ಮೌಲ್ಯದ ಮರಿಗಳು ಚಿರತೆಯ ದಾಳಿಗೆ ಸಿಲುಕಿ ಮೃತಪಟ್ಟಿರುವುದು ರೈತರು ಕಂಗೆಟ್ಟಿದ್ದು, ಇಲಾಖೆಯ ಅಧಿಕಾರಿಗಳು ಸರಕಾರದ ಸೂಕ್ತ ನೆರವು ದೊರಕಿಸಿಕೊಡುವಂತಾಗಬೇಕಿದೆ ಮನವಿ ಮಾಡಿದ ಅವರು, ಘಟನೆಯ ಬಗ್ಗೆ ಕ್ಷೇತ್ರದ ಶಾಸಕರ ಬಳಿ ಚರ್ಚಿಸಿ ಅಗತ್ಯ ನೆರವಿನ ಬಗ್ಗೆ ದೊರಕಿಸಲು ಪ್ರಯತ್ನ ನಡೆಸಲಾಗುವುದು ಎಂದರು.

ಚಿರತೆದಾಳಿ ನಡೆಸಿರುವ ಬಗ್ಗೆ ಸ್ಥಳದಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಚಿರತೆಯ ದಾಳಿಯಿಂದ ಮೃತಪಟ್ಟ ಮರಿಗಳಿಗೆ ಸೂಕ್ತ ಪರಿಹಾರ ನೀಡಲು ಇಲಾಖೆಯ ಮಾರ್ಗಸೂಚಿಯೊಂದಿಗೆ ವರದಿಯನ್ನು ತಯಾರಿಸಿ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಲಾಗುತ್ತದೆ ಎಂದು ವಲಯಾರಣ್ಯಾಧಿಕಾರಿ ಲೋಕೇಶ್ ತಿಳಿಸಿದರು.

ಮರಿಗಳ ಮೇಲೆ ದಾಳಿ ನಡೆಸಿ ಮೃತಪಟ್ಟ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಶು ಇಲಾಖೆಯ ವ್ಯಾಪ್ತಿಯಲ್ಲಿ ಸೂಕ್ತ ಪರಿಹಾರಕ್ಕಾಗಿ ಇಲಾಖೆಯಿಂದ ನೆರವು ನೀಡಲಾಗುತ್ತದೆ ಎಂದು ಪಶುಸಹಾಯಕ ನಿರ್ದೇಶಕ ಡಾ. ಉಮೇಶ್ ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ಹಾಗೂ ಪಶು ಇಲಾಖೆಯ ಸಿಬ್ಬಂದಿಗಳು ಇದ್ದರು.

 

Leave a Reply

Your email address will not be published. Required fields are marked *

error: Content is protected !!