ಸಮ ಸಮಾಜದ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ – ಬೈರತಿ ಸುರೇಶ್

ಸುದ್ದಿ ಕಡೂರು : ದಾರ್ಶನಿಕರ ಚಿಂತನೆಗಳ ಆದರ್ಶವನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಭಿವೃದ್ದಿಯ ದೃಷ್ಟಿಕೋನದಡಿಯಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ನಗರಾಭಿವೃದ್ದಿ ಸಚಿವ ಬೈರತಿಸುರೇಶ್ ತಿಳಿಸಿದರು.
ಪಟ್ಟಣದ ಸಂಗೊಳ್ಳಿರಾಯಣ್ಣ ವೇದಿಕೆಯ ಆವರಣದಲ್ಲಿ ಸೋಮವಾರ ನಡೆದ 536ನೇ ಶ್ರೀ ಭಕ್ತ ಕನಕದಾಸರ ಆಚರಣಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ,  ದಾಸ ಶ್ರೇಷ್ಠ ಕನಕದಾಸರು ಕೇವಲ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ತುಳಿತಕ್ಕೆ ಒಳಗಾಗಿರುವ ಎಲ್ಲಾ ಸಮಾಜಗಳನ್ನು ಅವರು ಪ್ರತಿನಿಧಿಸುತ್ತಾರೆ, ಈ ಹಿನ್ನಲೆಯಲ್ಲಿ ಬಸವಣ್ಣ, ಕನಕದಾಸರು ಹಾಗೂ ಅಂಬೇಡ್ಕರ್ ಅವರು ಹಾಕಿಕೊಟ್ಟ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿಕೊಂಡು ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.
ವ್ಯವಹಾರ ಮತ್ತು ಹೊಟ್ಟೆಪಾಡಿಗಾಗಿ ರಾಜಕೀಯಕ್ಕೆ ಬರುವವರು ಬಹಳ ದಿನ ರಾಜಕಾರಣದಲ್ಲಿ ಉಳಿಯುವುದಿಲ್ಲ. ಜನ ಸೇವೆಯನ್ನು ಧ್ಯೇಯವನ್ನಾಗಿ ಮಾಡಿಕೊಂಡು ರಾಜಕಾರಣಕ್ಕೆ ಬಂದರೆ ಮಾತ್ರ ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರಲು ಸಾದ್ಯವಾಗಲಿದೆ. ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭ ನೀಡಿದ ಐದು ಗ್ಯಾರಂಟಿಗಳನ್ನು ಮುಂದುವರೆಸಲಿದೆ. ಗ್ಯಾರಂಟಿಗಳನ್ನು ಮುಂದುವರೆಸಲು ಸರಕಾರಕ್ಕೆ ಹಣಕಾಸಿನಲ್ಲಿ ಕೊರತೆಯಿದೆ ಹಾಗಾಗಿ ಬರಲಿರುವ ಲೋಕಸಭೆ ಚುನಾವಣೆ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ವಿಪಕ್ಷಗಳು ಮಾಡುವ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಹೇಳಿದರು.
ಮುಂದಿನ 3 ತಿಂಗಳೊಳಗಾಗಿ ಕಡೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿರುವ ಕಾರ್ಯ ಮಾಡಲಾಗುತ್ತದೆ. ತಮ್ಮ ಇಲಾಖೆಯಡಿಯಲ್ಲಿ ಭದ್ರಾ ಕುಡಿಯವ ನೀರಿನ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ 100 ಕೋಟಿ ನೀಡಲಾಗಿದೆ. ಕಡೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಅದಮ್ಯ ಕನಸನ್ನು ಹೊತ್ತಿರುವ ಶಾಸಕ ಆನಂದ್ ಅವರ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ಇನ್ನು ಬಸ್ ನಿಲ್ದಾಣದ ಅಭಿವೃದ್ಧಿ, ಕಡೂರು ಬೀರೂರು ಅವಳಿ ಪಟ್ಟಣಗಳ ಅಭಿವೃದ್ದಿಗಳಿಗೆ ಒತ್ತು ನೀಡಲಾಗುವುದು. ಈಗಾಗಲೇ ಯುಜಿಡಿ ಕಾರ್ಯಕ್ಕೆ 25 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದರು.
ಶಾಸಕ ಕೆ.ಎಸ್. ಆನಂದ್‌ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಕೇವಲ ಒಂದು ವರ್ಗ ಅಥವ ಒಂದು ಜಾತಿಗೆ ಸೀಮಿತಗೊಳಿಸದೆ ಎಲ್ಲಾ ಸಮಾಜದ ಮಠಾಧೀಶರು ಮತ್ತು ವಿವಿಧ ಸಮಾಜಗಳಬಂಧುಗಳೊಂದಿಗೆ ಜಯಂತಿ ಆಚರಿಸುತ್ತಿರುವುದರಿಂದ ಭಾವೈಕ್ಯತೆಯ ಸಮಾರಂಭವಾಗಿ ರೂಪುಗೊಳ್ಳಲು ಸಾಧ್ಯವಾಗಲಿದೆ.  ಜಿಲ್ಲೆಯಲ್ಲಿ ಕಡೂರು ಮೊದಲಿನಿಂದಲೂ ಉಪೇಕ್ಷೆಗೊಳಗಾಗಿದೆ. ಕಡೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವರು ಮುಂದಾಗಬೇಕಿದೆ.  ಕಡೂರು ಬೀರೂರು ಪಟ್ಟಣದಲ್ಲಿ ಯುಜಿಡಿ ಕಾರ್ಯಕ್ಕೆ ಕಡಿಮೆಯಾಗಿರುವ ಹಣವನ್ನು ಮಂಜೂರು ಮಾಡುವುದರ ಜೊತೆ ಭಧ್ರಾ ಉಪಕಣಿವೆ ಯೋಜನೆಯನ್ನು ನಬಾರ್ಡ್ ಯೋಜನೆಗೆ ಸೇರ್ಪಡೆಗೊಳಿಸಬೇಕು. ಕಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಜವಾಬ್ದಾರಿಯನ್ನು ಕ್ಷೇತ್ರದ ಜನ ನನ್ನ ಮೇಲೆ ಹೊರಿಸಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ಅವರು ಶಾಸಕರಾದ ಸಂದರ್ಭ ಸಿದ್ದರಾಮಯ್ಯನವರ ಮೂಲಕ ಕ್ಷೇತ್ರಕ್ಕೆ ಅಪಾರ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿ ಪಡಿಸಿದ್ದರು. ಆದುದರಿಂದ ಕಡೂರು ಕ್ಷೇತ್ರದ ಅಭಿವೃದ್ದಿಯಲ್ಲಿ ಸಿದ್ದರಾಮಯ್ಯನವರ ಕೊಡುಗೆ ಅಪಾರವಾಗಿದೆ. ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿಪಡಿಸಲು ನಗರಾಭಿವೃದ್ದಿ ಸಚಿವರಾದ ಬೈರತಿ ಸುರೇಶ್ ಅವರು ವಿಶೇಷ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ,  ತಾಲೂಕಿನ ಆಸಂದಿ ಗ್ರಾಮದಲ್ಲಿರುವ ಶ್ರೀಜಗದ್ಗುರು ರೇವಣಸಿದ್ದೇಶ್ವರ ಮಠದ ನಿರ್ಮಾಣದ ಕಾರ್ಯವು ಭಕ್ತರ ಸಹಕಾರದಿಂದ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ಕಾಮಗಾರಿ ಕೈಗೊಳ್ಳಲು ಹಣಕಾಸಿನ ಕೊರತೆ ಎದುರಾಗಿದೆ. ಈ ಹಿನ್ನಲೆಯಲ್ಲಿ ಅಗತ್ಯ 4 ಕೋಟಿ ಅನುದಾನವನ್ನು ಬರುವ 2024-25ನೇ ಸಾಲಿನ ಬಜೆಟ್‌ನಲ್ಲಿ ಸರಕಾರದಿಂದ ಹಣಕಾಸಿನ ನೆರವನ್ನು ದೊರಕಿಸಿಕೊಡುವಂತೆ ಸಚಿವರ ಬಳಿ ಮನವಿ ಮಾಡಿದರು.
ಜಯಂತಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ತೋಟದಮನೆ ಮೋಹನ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಯಂತಿ ಆಚರಣಾ ಮಹೋತ್ಸವವನ್ನು ಕ್ಷೇತ್ರದ ಶಾಸಕರ ಮತ್ತು ಸಮಾಜದ ಆಶಯದೊಂದಿಗೆ ವಿವಿಧ ಸಮಾಜದ ಪೂಜ್ಯಶ್ರೀಗಳು ಮತ್ತು ವಿವಿಧ ಸಮಾಜದ ಅಧ್ಯಕ್ಷರುಗಳನ್ನು ಗೌರವಿಸುವ ಮೂಲಕ ಭಾವೈಕ್ಯತೆಯ ಸಂದೇಶದೊಂದಿಗೆ ಅರ್ಥಪೂರ್ಣ ಸಮಾರಂಭವನ್ನಾಗಿ ಆಚರಣೆಗೊಂಡಿರುವುದು ಆತ್ಮತೃಪ್ತಿ ಹೊಂದಲಾಗಿದೆ, ಸಮಿತಿಯ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಸಮಾರAಭದಲ್ಲಿ ಕಾಗಿನೆಲೆ ಕನಕಗುರುಪೀಠ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಾಪುರಿ ಸ್ವಾಮೀಜಿ,ಭಗೀರಥಪೀಠದ ಡಾ ಪುರುಷೋತ್ತಮನಂದಾ ಪುರಿ ಸ್ವಾಮೀಜಿ, ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಸಂಶೋಧಕ ಡಾ.ಲಿಂಗದಹಳ್ಳಿ ಹಾಲಪ್ಪ ಉಪನ್ಯಾಸ ನೀಡಿದರು. ಶಾಸಕರಾದ ಎಚ್.ಡಿ.ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್.ಆರ್. ಭೋಗಪ್ಪ, ಶರತ್‌ಕೃಷ್ಣಮೂರ್ತಿ, ಕರಿಬಡ್ಡೆ ಶ್ರೀನಿವಾಸ್, ಕೆ.ಎಚ್.ಎ. ಪ್ರಸನ್ನ, ಎಚ್.ಸಿ.ಲೋಕೇಶ್, ಎಚ್.ಆರ್.ತಿಪ್ಪೇಶ್, ನಟ ಕಡೂರುಧರ್ಮಣ್ಣ, ವನಮಾಲ ದೇವರಾಜ್, ಸುಧಾಉಮೇಶ್, ಕೆ.ಬಿ.ಸೋಮೇಶ್, ಕೆ.ಎಚ್.ಶಂಕರ್, ಕೆ.ಜಿ.ಲೋಕೇಶ್ವರ್, ಈರಳ್ಳಿರಮೇಶ್, ಕೆ.ಆರ್.ಸುರೇಶ್, ಕೆ.ಜಿ.ಶ್ರೀನಿವಾಸ್ ಮೂರ್ತಿ, ಎಚ್.ಉಮೇಶ್, ಹರೀಶ್, ಎಂ.ಸೋಮಶೇಖರ್, ಚೇತನ್ ಕೊಡಪ್ಪ, ರಂಗನಾಥ್,  ಗಿರೀಶ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!