ಬರದ ನಿರ್ವಹಣೆಯಲ್ಲಿ ಯಾವುದೇ ಹಣ ದುರುಪಯೋಗಬಾರದು – ಎಚ್.ಡಿ. ತಮ್ಮಯ್ಯ

ಸುದ್ದಿ ಕಡೂರು : ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆತೋರಲಿದೆ ಎಂಬ ಪಟ್ಟಿಯನ್ನು ಗ್ರಾಪಂ ಪಿಡಿಒಗಳು ಮಾಡಬೇಕಿದೆ. ನೊಡೆಲ್ ಅಧಿಕಾರಿಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಬೇಕಿದೆ. ಬರದ ನಿರ್ವಹಣೆಯಲ್ಲಿ ಯಾವುದೇ ಹಣದ ದುರುಪಯೋಗಬಾರದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಖರಾಯಪಟ್ಟಣ ಹೋಬಳಿ ಭಾಗದ ಬರಪರಿಸ್ಥಿತಿ ಕುರಿತು ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಲ್ಲಿ ಬಹಳಷ್ಟು ಅವ್ಯವಹಾರಗಳು ನಡೆಯುತ್ತದೆ, ಇದಕ್ಕೆ ನನ್ನ ಅಧಿಕಾರವಧಿಯಲ್ಲಿ ಅವಕಾಶ ನೀಡುವುದಿಲ್ಲ. ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು. ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರು ದೊರಕುತ್ತಿಲ್ಲ. ನರೇಗಾ ಯೋಜನೆಯಡಿಯಲ್ಲಿ ಗೋ ಕಟ್ಟೆಗಳನ್ನು ನಿರ್ಮಿಸಬೇಕಿದೆ. ಬರಕ್ಕೆ ಸಂಬAಧಿಸಿದAತೆ ಕಾರ್ಯಗಳು ಆಗಬೇಕಿದೆ ಎಂದರು.

ನರೇಗಾದಡಿ ಶೇಕಡ5 ಕ್ಕಿಂತ ಕಡಿಮೆ ಸಾಧನೆ ಮಾಡಿರುವ ನಿಡಘಟ್ಟ, ಚಿಕ್ಕದೇವನೂರು, ಹುಲಿಕೆರೆ, ನಾಗೇನಹಳ್ಳಿ ಮತ್ತು ಜೋಡಿ ಹೋಚಿಹಳ್ಳಿ ಗ್ರಾಮ ಪಂಚಾಯಿತಿಗಳು ಜನವರಿ ಅಂತ್ಯದೊಳಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇಕಡ 80 ಸಾಧನೆ ಮಾಡಬೇಕು ಎಂದು ಪಂಚಾಯಿತಿಯ ಪಿಡಿಒಗಳಿಗೆ ತಾಕೀತು ಮಾಡಿದರು.

ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ 15 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ರವಿಶಂಕರ್ ಸಭೆಯಲ್ಲಿ ಮಾಹಿತಿ ನೀಡಿದಾಗ ಶಾಸಕ ತಮ್ಮಯ್ಯ ಪ್ರತಿಕ್ರಿಯಿಸಿ ಮಾತನಾಡಿ, ಬರನಿರ್ವಹಣೆಗೆ ಜಿಲ್ಲಾಧಿಕಾರಿಗಳ ಬಳ ಹಣವಿದೆ. ನಿಖರವಾಗಿ ಬರಕ್ಕೆ ಎಷ್ಟು ಹಣಬೇಕು? ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರೆ, ಸರಕಾರದ ಮಟ್ಟದಲ್ಲಿ ಹೆಚ್ಚಿನ ಹಣ ತರಲಾಗುವುದು. ಸಖರಾಯಪಟ್ಟಣ ಹೋಬಳಿಗೆ ಯಾವುದೇ ತೊಂದರೆಯಾಗಬಾರದು. ಮುಂದಿನ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಬಹುದು ಇದಕ್ಕೆ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕಿದೆ. ಮೇವಿನ ಲಭ್ಯತೆಯ ಬಗ್ಗೆ ಕ್ರಮ ವಹಿಸಬೇಕಿದೆ. ಇದರ ಬಗ್ಗೆ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ನಿಖರವಾದ ವರದಿಯನ್ನು ನೀಡಬೇಕಿದೆ ಎಂದರು.

ಸಭೆಯಲ್ಲಿ ತಾಲೂಕು ಟಾಸ್ಕ್ ಫೋರ್ಸ ನೋಡಲ್ ಅಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಚ್.ಎಲ್. ಸುಜಾತ, ತಹಸೀಲ್ದಾರ್ ಎಂ.ಪಿ.ಕವಿರಾಜ್ ತಾಪಂ ಇಒ ಸಿ.ಆರ್.ಪ್ರವೀಣ್, ತಾಪಂ ಯೋಜನಾಧಿಕಾರಿ ವಿಜಯ್‌ಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!