ಗಿರಿಯಾಪುರದಲ್ಲಿ ಮಾ.4ರಿಂದ ಶಿವಾನುಭವ ಸಮ್ಮೇಳನ

ಸುದ್ದಿ ಕಡೂರು: ತಾಲ್ಲೂಕಿನ ಗಿರಿಯಾಪುರದಲ್ಲಿ 75 ನೇ ವರ್ಷದ ಶಿವಾನುಭವ ಸಮ್ಮೇಳನವನ್ನು ಮಾ.4ರಿಂದ6ರ ತನಕ ಏರ್ಪಡಿಸಲಾಗಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಸಿ.ಶಿವಲಿಂಗಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹಾನಗಲ್ಲ ಕುಮಾರ ಶಿವಯೋಗಿಗಳ ಸ್ಮರಣೆಯಲ್ಲಿ ಅವರ ಶಿಷ್ಯರಾದ ಸದಾಶಿವ ಶಿವಾಚಾರ್ಯ ಸ್ವಾಮಿಗಳು 75 ವರ್ಷಗಳ ಹಿಂದೆ ಗಿರಿಯಾಪುರದಲ್ಲಿ ಶಿವಾದ್ವೈತ ತತ್ವಪ್ರಸಾರ ಕೇಂದ್ರ ಆರಂಭಿಸಿ ಶಿವಾನುಭವ ಸಮ್ಮೇಳನವನ್ನು ಆರಂಭಿಸಿದರು. ಈಗ ನಡೆಯಲಿರುವ ಸಮ್ಮೇಳನ ಸದಾಶಿವ ಶಿವಾಚಾರ್ಯರ 50 ನೇ ವರ್ಷದ ಲಿಂಗೈಕ್ಯ ಸಂಸ್ಮರಣೆಯೂ ಆಗಿದೆ ಎಂದರು.

ಮಾ.4 ರಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ಉಪಸ್ಥಿತಿಯಲ್ಲಿ ಅಮೃತಮಹೋತ್ಸವ ಭವನ ಮತ್ತು ಸಭಾಭವನವನ್ನು ನಾಡೋಜ ಗೊ.ರು.ಚೆನ್ನಬಸಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಉದ್ಘಾಟಿಸುವರು. ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮೀಜಿ ‘ವಿಭೂತಿ’ ಗ್ರಂಥ ಲೋಕಾರ್ಪಣೆ ಮಾಡುವರು. ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಹಾನಗಲ್ಲ ಕುಮಾರ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ಮಾ.5 ರ ಮಂಗಳವಾರ ಎರಡು ಚಿಂತನಗೋಷ್ಟಿಗಳು ನಡೆಯಲಿವೆ. ಅಂದು ಸಂಜೆ ವಿರಾಟಪುರದ ವಿರಾಗಿ ಚಲನಚಿತ್ರ ಪ್ರದರ್ಶನವಿದೆ. ಮಾ.6 ರ ಬುಧವಾರ ಚಿಂತನ ಗೋಷ್ಟಿ ನಡೆಯಲಿದ್ದು ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಆನಂದಪುರ0 ಮುರುಘರಾಜೇಂದ್ರ ಮಠದ ಶ್ರೀಗಳು ಹಾಗೂ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್ ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಿತಿ ಕಾರ್ಯದರ್ಶಿ ಗುರುಶಾಂತಪ್ಪ ಮಾತನಾಡಿ, ಸಮ್ಮೇಳನದಲ್ಲಿ ನಾಡಿನ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಹಲವಾರು ಚಿಂತಕರು ಗೋಷ್ಟಿಗಳಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಹಲವಾರು ಸಾಧಕರನ್ನು ಸಮ್ಮೇಳನದಲ್ಲಿ ಗೌರವಿಸಲಾಗುವುದು. ಸಮ್ಮೇಳನದ ಯಶಸ್ಸಿಗಾಗಿ ಆಚರಣಾ ಸಮಿತಿ ರಚಿಸಲಾಗಿದ್ದು, ಶಾಸಕ ಕೆ.ಎಸ್.ಆನಂದ್ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ವಸತಿ ಮತ್ತು ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಸಮ್ಮೇಳನದ ಯಶಸ್ಸಿಗೆ ಹಲವಾರು ಸಂಘ ಸಂಸ್ಥೆಗಳ ಸಹಕಾರ ಹಾಗೂ ಗಿರಿಯಾಪುರ ಗ್ರಾಮಸ್ಥರ ಸಹಕಾರ ಅತ್ಯಂತ ಹೆಚ್ಚಿನದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಚರಣಾ ಸಮಿತಿ ಸದಸ್ಯರಾದ ಜಿ.ಎಂ.ಪ್ರಸಾದ್, ಜಿ.ಎಂ. ನೀಲಲೋಚನಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯ ಉಮಾಮಹೇಶ್ವರಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!