ಬೀರೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

ಸುದ್ದಿ ಬೀರೂರು:ನೂರಾರು ವರ್ಷಗಳ ಇತಿಹಾಸವುಳ್ಳ ಇಲ್ಲಿನ ಹಳೇಪೇಟೆಯ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಮಹಾ ರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ದಾಭಕ್ತಿಗಳಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಮಾ. 13ರಿಂದ 22ರವರೆಗೂ ಪ್ರತಿದಿನ ಊರಿನ ರಾಜಬೀದಿಗಳಲ್ಲಿ ಆನೆ. ಸಿಂಹ, ಸರ್ಪ, ಕುದುರೆ, ಬಸವ ನವಿಲು, ಮಂಟಪ ಉತ್ಸವ ಸೇರಿದಂತೆ ಎಂಟು ದಿನಗಳ ಕಾಲ ಶ್ರೀ ವೀರಭದ್ರಸ್ವಾಮಿಯನ್ನು ಪುಷ್ಪಗಳಿಂದ ಅಲಂಕರಿಸಿ ವಿವಿಧ ವಾಹನಗಳ ಸಹಿತ ಉತ್ಸವ ಹಾಗೂ ದಾಸೋಹ ಕಾರ್ಯಕ್ರಮ ನೆರವೇರಿಸಲಾಯಿತು.
ಶನಿವಾರ ಸಂಜೆ  ವಿಶೇಷ ಹೂವಿನ ಅಲಂಕಾರ, ಹಾಗೂ ತಳಿರು ತೋರಣಗಳಿಂದ ಅಲಂಕೃತಗೊ೦ಡಿದ್ದ ರಥದಲ್ಲಿ ಶ್ರೀವೀರಭದ್ರ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ರುದ್ರಹೋಮ ಸೇರಿದಂತೆ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿ  ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದಿಂದ ದೂರದ ಮಹಾನವಮಿ ಬಯಲಿನ ವರಗೆ ರಥವನ್ನು ಎಳೆಯುವ ಸಂದರ್ಭದಲ್ಲಿ ರಸ್ಥೆಯ ಇಕ್ಕೆಲಗಳಲ್ಲಿ ಸೇರಿದ್ದ ವೀರಭದ್ರಸ್ವಾಮಿಗೆ ಜೈ ಎನ್ನುತ್ತಾ ಜಯಘೋಶ ಕೂಗಿದರೆ, ನೂರಾರು ಭಕ್ತಾದಿಗಳು ತೇರಿಗೆ ಬಾಳೆಹಣ್ಣು ಎಸೆಯುವುದರ ಜೊತೆ ಹಣ್ಣು ಕಾಯಿ ಸಮರ್ಪಿಸುವುದರ ಮೂಲಕ ತಮ್ಮ ಶ್ರದ್ದಾ ಭಕ್ತಿ ಅರ್ಪಿಸಿದರು.
ವಾಪಸ್ಸು ರಥ ದೇವಾಲಯದ ಸನಿಹಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಎಳೆ ಹಸುಳೆಗಳು ಸೇರಿದಂತೆ ನೂರಾರು ಮಕ್ಕಳು ರಥದ ಸುತ್ತಲೂ ದಿಂಡು ಉರುಳು ಸೇವೆಯ ಮೂಲಕ ಮಕ್ಕಳ ಶ್ರೇಯಸ್ಸು ಹಾಗೂ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು.
ರಥೋತ್ಸವದ ಅಂಗವಾಗಿ ನಂದಿಧ್ವಜ ಕುಣೆತ.ವೀರಗಾಸೆ ಸೇರಿದಂತೆ ವಿವಿಧ ವಾದನಗಳು ಭಕ್ತರ ಗಮನ ಸೆಳೆಯಿತು.
ಶ್ರೀ ವೀರಭದ್ರ ಸ್ವಾಮಿ ಯುವಕ ಸಂಘ ಸೇರಿದಂತೆ ಭಕ್ತಾದಿಗಳು ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಅನ್ನ ದಾಸೋಹ ನೆರವೇರಿಸಿ ಕಾರ್ಯಕ್ರಮಕ್ಕೆ ಮೆರಗನ್ನ ತಂದರು.
ಭಾನುವಾರ ಸ್ವಾಮಿಗೆ ಓಕಳಿ ಅವಭೃತೋತ್ಸವ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!