ತಾಲ್ಲೂಕು ಜಾನಪದ ಸಮ್ಮೇಳನಾಧ್ಯಕ್ಷರಿಗೆ ಸಮ್ಮೇಳನಕ್ಕೆ ಆಹ್ವಾನ

ಸುದ್ದಿ ಕಡೂರು : ತಾಲ್ಲೂಕಿನ ಯಗಟಿ ಗ್ರಾಮದಲ್ಲಿ ಜ.16ರಂದು ನಡೆಯಲಿರುವ ಕರ್ನಾಟಕ ಜಾನಪದ ಪರಿಷತ್ತಿನ ದ್ವಿತೀಯ ಜಾನಪದ ತಾಲ್ಲೂಕು ಸಮ್ಮೇಳನಕ್ಕಾಗಿ ಸಮ್ಮೇಳನಾಧ್ಯಕ್ಷರಾದ ಕುಂಕನಾಡು ಓಂಕಾರಮೂರ್ತಿ ಅವರನ್ನು  ಕುಂಕನಾಡು ಗ್ರಾಮದ ಸ್ವಗೃಹದಲ್ಲಿ ತಾಲ್ಲೂಕು ಘಟಕದ ವತಿಯಿಂದ ಸಮ್ಮೇಳನಕ್ಕಾಗಿ ಆಹ್ವಾನ ನೀಡಿದರು.

ಬಳಿಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಓಂಕಾರ್ ಮೂರ್ತಿಯವರು ಜಾನಪದ ಜಾಗೃತಿ ವೇದಿಕೆಯ ಮೂಲಕ ಸಾಹಿತ್ಯ, ಒಗಟು, ಗಾದೆ, ಜಾನಪದ ಹಾಡುಗಳು ಮುಂತಾದ ಸಾಹಿತ್ಯ ಪ್ರತಿಗಳನ್ನು, ಮನೆ ಮನೆಗೆ ಪ್ರಚುರಪಡಿಸಿ ಕೆಲವಾರು ವರ್ಷಗಳ ಹಿಂದೆಯೇ ಜಾನಪದ ಸಂಸ್ಕೃತಿ ಕಲೆ ಸಾಹಿತ್ಯದ ಬಗ್ಗೆ ಅರಿವನ್ನು ಇಂದಿನ ಪೀಳಿಗೆಯ ಅವರಲ್ಲಿ ಮೂಡಿಸುತ್ತಾ ಕಾರ್ಯನಿರ್ವಹಿಸುತ್ತಿದ್ದಾರೆ. ಮಣ್ಣಿನ ಮತ್ತು ಮರದಗೊಂಬೆಗಳು ಮತ್ತು ಆಕೃತಿಗಳು ಶಿಲ್ಪಗಳನ್ನು ನೈಜ ರೂಪದಲ್ಲಿ ಬಿಡಿಸುವುದು ಮತ್ತು ಕೆತ್ತುವುದುಹಾಗೂ ಜನಪದ ಚಿತ್ರಗಳನ್ನು ಬಹಳ ಕೌಶಲ್ಯಪೂರ್ಣವಾಗಿ ಬರೆದಿರುವುದು ಅವರ ಜನಪದ ಕಲಾ ಪ್ರತಿಭೆಗೆ ಸಾಕ್ಷಿಯಾಗಿದ್ದಾರೆ. ಈ ನಿಟ್ಟಿನಲ್ಲಿ ತಾಲ್ಲೂಕು ಘಟಕದ ವತಿಯಿಂದ ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಜಗದೀಶ್ಚಚಾರ್ ಮಾತನಾಡಿ, ಜ.16ರಂದು ಯಗಟಿಯಲ್ಲಿ ನಡೆಯುವ ಸಮ್ಮೇಳನವು ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಡೆಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದಲ್ಲಿ ಜಿಲ್ಲೆಯ ಪ್ರಮುಖ ಕಲಾತಂಡಗಳಾದ ವೀರಗಾಸೆ,ಡೊಳ್ಳು ಕುಣಿತ, ಪಟ ಕುಣಿತ,ನಂದಿ ದ್ವಜ,,ಅಸಾದಿ ಕುಣಿತ ಕೋಲಾಟ, ಕಂಸಾಳೆ, ಮುಂತಾದ ಕಲಾತಂಡಗಳ ಮೂಲಕ ಪೂರ್ಣ ಕುಂಭ ಸ್ವಾಗತದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯಗಟಿಯ ಕಾಲೇಜು ಆವರಣದಿಂದ ವೇದಿಕೆ ಬಳಿ ಅದ್ದೂರಿಯ ಮೆರವಣಿಗೆ ನಡೆಸಲಾಗುವುದು. ಕ್ಷೇತ್ರದ ಶಾಸಕರು, ಜಾನಪದ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು, ಚಿಂತಕರು ಭಾಗವಹಿಸಲಿದ್ದಾರೆ. ಹಲವು ವಿಚಾರಗೋಷ್ಟಿ ಮತ್ತು ಅರ್ಥಪೂರ್ಣ ಸಮ್ಮೇಳನವನ್ನಾಗಿ ರೂಪಿಸಲು ಸಿದ್ದತೆ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿಯೇ ಆಹ್ವಾನಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದರು.

ಸಮ್ಮೇಳನಾಧ್ಯಕ್ಷ ಕುಂಕನಾಡು ಓಂಕಾರ್‌ಮೂರ್ತಿ ಮಾತನಾಡಿ, ರಾಜ್ಯದಾದ್ಯಂತ ತಾವು ಮಾಡಿದ ಜನಪದ ಕಲಾ ಸೇವೆಯನ್ನು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರು ಮತ್ತುಪದಾಧಿಕಾರಿಗಳು ಗುರುತಿಸಿ ಜಾನಪದದ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಗೌರವಿಸುತ್ತಿರುವುದು ಸಂತಸ ಮೂಡಿಸಿದೆ. ಈ ಜಾನಪದ ಕಲಾ ತೇರನ್ನು ಎಳೆಯಲು ಇಂದಿನ ಯುವಕ ಯುವತಿಯರು ಪಾಶ್ಚತ್ಯ ಸಂಸ್ಕೃತಿಯ ಗುಂಗಿನಿಂದ ಹೊರಬಂದು ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕಾಗಿದೆ.ಜಾನಪದ ಸಂಸ್ಕೃತಿಯು ಎಲ್ಲಾ ಧರ್ಮ ಮತ್ತು ಪಂಗಡಗಳ ತಾಯಿಬೇರಾಗಿದೆ. ಈ ಕಲೆ ಮತ್ತು ಸಂಸ್ಕೃತಿಯನ್ನು ಹಿಂದಿನ ಪೀಳಿಗೆಯವರು ಮರೆಯುತ್ತಿರುವುದು ದುರಾದೃಷ್ಟಕರ ಸಂಗತಿ ತಾಲ್ಲೂಕು ಸಮ್ಮೇಳನದಲ್ಲಿ ಜಾನಪದ ಕಲೆಯ ಬಗ್ಗೆ ಬೆಳಕು ಚೆಲ್ಲುವಂತಾಗಲಿ ಎಂದು ಆಶಯವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕಡೂರು ತಾಲೂಕು ಕಾರ್ಯದರ್ಶಿ ಕುಂಕನಾಡು ನಾಗರಾಜು, ಅಜ್ಜಂಪುರ ತಾಲೂಕು ಅಧ್ಯಕ್ಷ ಮಾಳೇನಳ್ಳಿ ಬಸಪ್ಪ, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್ ತಿಪ್ಪೇಶ್, ಸಂಘಟನಾ ಕಾರ್ಯದರ್ಶಿ ಚಿಕ್ಕನಲ್ಲೂರು ಜಯಣ್ಣ, ಪರಮೇಶ್ವರಪ್ಪ, ಯಗಟಿ ಶಂಕರ್, ಮಲ್ಲಪ್ಪ, ಗಿರಿಯಮ್ಮ ದೇವಿ ಕಲಾತಂಡದ ಸದಸ್ಯರು ಇದ್ದರು.

 

Leave a Reply

Your email address will not be published. Required fields are marked *

error: Content is protected !!