ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಏನು ತಂದಿದ್ದಾರೆ?: ಮಾಜಿ ಸಚಿವ ಸಿ.ಟಿ. ರವಿ ಪ್ರಶ್ನೆ

ಸುದ್ದಿ ಕಡೂರು: ತಪ್ಪುಗಳನ್ನು ಕ್ಷಮಿಸಬಹುದು. ಆದರೆ ಮೋಸವನ್ನಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ತಿಳಿಸಿದರು.
ಕಡೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಸ್ತುತ ಸರ್ಕಾರ ವಿನ್ನೂ ಕಾರ್ಯಾರಂಭವನ್ನೇ ಮಾಡಿಲ್ಲ. ಕೇವಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ಅವನ್ನೆಲ್ಲ ನಮ್ಮದೆಂದು ಹೇಳಿಕೊಳ್ಳುತ್ತಿದೆ‌. ಹಿಂದುಳಿದ ವರ್ಗಗಳಿಗಾಗಿ ಮೀಸಲಿಟ್ಟಿದ್ದ 11 ಸಾವಿರ ಕೋಟಿಯನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ಗಮನಿಸಬೇಕು. ಜಿಲ್ಲೆಯ 5 ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೊಸದಾಗಿ ಏನು ತಂದಿದ್ದಾರೆಂಬುದನ್ನು ತಿಳಿಸಲಿ ಎಂದರು.

ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷದಲ್ಲಿ ಸತ್ಯ ಗೆಲ್ಲುತ್ತದೆ. ಪರಿಶಿಷ್ಟ ಜಾತಿ ವರ್ಗಗಳಿಗೆ ಬಿಜೆಪಿ ಎಂದೂ ಮೋಸ ಮಾಡಲಿಲ್ಲ. ಕಾಂಗ್ರೆಸ್ ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದೆ. ಸದಾಶಿವ ಆಯೋಗ ರಚನೆಯಾದದ್ದು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ನಂತರ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಯಿತು. ಸಿದ್ದಾರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಯಾಕೆ ವರದಿ ಜಾರಿ ಮಾಡಲಿಲ್ಲ? ನಂತರ ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಮಾಡಲಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ವರದಿ ಜಾರಿ ಮಾಡುತ್ತೇನೆಂದವರು ಈಗೇನು ಮಾಡಿದ್ದಾರೆ? ಬಿಜೆಪಿಯವರು ಮೀಸಲಾತಿಯನ್ನು ಹೆಚ್ಚು ಮಾಡಿ ಎಸ್.ಸಿ.ಸಮುದಾಯಕ್ಕೆ ಒಳಿತನ್ನು ಮಾಡಿದ್ದಾರೆಂಬುದು ಸತ್ಯ. ಕಾಂಗ್ರೆಸ್ ಈಗಲೂ ಈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂಬುದು ಸತ್ಯ ಎಂದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,
ರಾಮಮಂದಿರ ಉದ್ಘಾಟನೆ ಕೋಟ್ಯಾಂತರ ಭಾರತೀಯರ ಭಾವನಾತ್ಮಕ ಕಾರ್ಯಕ್ರಮ. ಹರಿಪ್ರಸಾದ್ ಹೇಳಿದಂತೆ ಪಕ್ಷದ ಕಾರ್ಯಕ್ರಮವಲ್ಲ. ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮವಲ್ಲ ಎಂದು ಅವರಿಗೆ ಏಕೆ ಅನ್ನಿಸಿತು? ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆಗಳನ್ನು ತಾವೇ ಬಗೆಹರಿಸಿದ್ದರೆ ಕರಸೇವೆಗೆ ಅವಕಾಶವೇ ಇರಲಿಲ್ಲ. ಕಾಶಿ ಕಾರಿಡಾರ್ ಅವರೇ ಮಾಡಿ ಗಂಗಾರತಿ ಮಾಡಿದ್ದರೆ ಮೋದಿಯವರನ್ನು ಹಿಂದೂ ಹೃದಯ ಸಾಮ್ರಾಟ್ ಎಂದು ಕರೆಯುವ ಪ್ರಮೇಯವೇ ಬರುತ್ತಿರಲಿಲ್ಲ.ಸಿದ್ದರಾಮಯ್ಯನವರು ತಪ್ಪು ಮಾಡಿದವರಿಗೆ ಬಿಡೋಕ್ ಆಗುತ್ತಾ ಎಂದಿದ್ರು
ಆದರೆ ಡಿಜೆಹಳ್ಳಿ-ಕೆಜೆಹಳ್ಳಿಗೆ ಬೆಂಕಿ ಹಾಕಿದವರನ್ನು ಬಿಡಿ ಎಂದು ಅವರ ಮಂತ್ರಿಯೇ ಶಿಫಾರಸ್ಸು ಮಾಡಿದ್ದರು.ಮೈಸೂರಿನಲ್ಲಿ ಕೋಮು ಗಲಭೆ ಮಾಡಿದ ಎಸ್.ಡಿ.ಪಿ.ಐ. ಹಾಗೂ ಪಿ.ಎಫ್.ಐ ಕೇಸ್ ಗಳನ್ನ ಅವರ ಸರ್ಕಾರವೇ ಹಿಂಪಡೆದಿದೆ.ಅವರು ತಪ್ಪು ಮಾಡಿದವರು ಎಂದು ಅನ್ನಿಸಲಿಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಅವರು ಹರಿಪ್ರಸಾದ್ ಅವರದು ಪೂರ್ವಗ್ರಹಪೀಡಿತ ಮನಸ್ಥಿತಿ ಎಂದು ಲೇವಡಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!