ಮಾಧ್ಯಮ ಸಂಸ್ಥೆಗೆ ಗುಡ್ ಬೈ ಹೇಳಿದ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ

ಸುದ್ದಿ ಬೆಂಗಳೂರು : ರಾಜ್ಯ ಬಿಜೆಪಿ ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಬೆನ್ನಲ್ಲೇ ರಾಜ್ಯ ಬಿಜೆಪಿ ವಕ್ತಾರರನ್ನಾಗಿ ಖ್ಯಾತ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರನ್ನು  ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ. ರಾಘವೇಂದ್ರ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಮಾಧ್ಯಮದ ವೃತ್ತಿ ಕಾಯಕ ಕ್ಷೇತ್ರಕ್ಕೆ ಗುಡ್ ಬೈ ಹೇಳುವ ಮೂಲಕ ರಾಜಕೀಯ ಪಯಣದತ್ತ ಸಾಗಲು ಮುಂದಿಡಿ ಇಟ್ಟಿರುವ ಬಗ್ಗೆ ತಮ್ಮ ಫೈಸ್ ಬುಕ್ ವಾಲ್ ನೊಂದಿಗೆ ಮಾಹಿತಿ ಹಂಚಿಕೊಂಡಿರುವುದು.

 

ಹೊಸಹಾದಿಯ ಹೊಸಿಲಲಿ ನಿಂತು, ಸಾಗಿ ಬಂದ ಹಾದಿಗೊಮ್ಮೆ ನಮಿಸುತ್ತಾ

ಈ ದೇಶದ ಕೋಟ್ಯಂತರ ಜನರಂತೆ ನಾನೂ ಯಾವುದೋ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಅನೇಕ ಸಂಕಷ್ಟಗಳ ನಡುವೆ ಬೆಳೆದವನು. ಆದರೆ ಇತರರ ಅಂತದೇ ಸಂಕಷ್ಟಗಳನ್ನು ಪರಿಹರಿಸಬೇಕೆಂದು ಸದಾ ಕನಸು ಕಂಡವನು. ಅದರ ಸಲುವಾಗಿ ಮೊದಲು ಐ ಎ ಎಸ್ ಅಧಿಕಾರಿಯಾಗಲು ಬಯಸಿದೆ. ತಯಾರಿ ನಡೆಸಿದೆ. ಆದರೆ ಪತ್ರಿಕೋದ್ಯಮ ನನ್ನನ್ನು ಸೆಳೆಯಿತು. ಅದನ್ನೆ ಆರಿಸಿಕೊಂಡೆ. ನನ್ನ ಅದೃಷ್ಟ ಮತ್ತು ವಿಜಯ ಸಂಕೇಶ್ವರರಂತಹ ಧೀಮಂತರ ಸಹಕಾರದಿಂದ ಬಹುಬೇಗ ಸಂಪಾದಕನೂ ಆದೆ. ಪತ್ರಿಕೋದ್ಯಮದಲ್ಲಿ ಕಳೆದ ಈ 23 ವರ್ಷಗಳಲ್ಲಿ ಹಲವು ಬಾರಿ ಮಗ್ಗುಲು ಬದಲಿಸಿದ್ದೇನೆ. ಹಲವು ಪ್ರಯೋಗಗಳನ್ನು ಮಾಡಿದ್ದೇನೆ. ಆದರೆ ಈಗ ವೃತ್ತಿಪರ ಪತ್ರಿಕೋದ್ಯಮಕ್ಕೇ ವಿದಾಯ ಹೇಳುವ ಸಮಯ ಬಂದಿದೆ. ವ್ಯಷ್ಟಿಗಿಂತ ಸಮಷ್ಠಿ ಮುಖ್ಯ ಎಂದು ನಂಬಿದವನು ನಾನು. ಹಾಗಾಗಿ, ನನ್ನ ಈವರೆಗಿನ ಗೆಲುವು ನನ್ನೊಬ್ಬನದಲ್ಲ. ಇಷ್ಟು ದಿನ ಮಾಧ್ಯಮ ಪಯಣದಲ್ಲಿ ನನಗೆ ಅವಕಾಶ ನೀಡಿದ ಸಂಸ್ಥೆಗಳಿಗೆ, ಜೊತೆಯಾದ‌ ಸಹಪಥಿಕರಿಗೆ, ನನ್ನ ಯೋಜನೆಗಳನ್ನು ಜಾರಿಮಾಡಲು ಶ್ರಮಿಸಿದ, ನನ್ನ ಈವರೆಗಿನ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳು.🙏

ನಾನಿಲ್ಲದಿದ್ದರೂ, ನಾನು ಕಟ್ಟಿದ ನನ್ನ ಕನಸಿನ ವಿಸ್ತಾರ ಮೀಡಿಯಾ ಸಂಸ್ಥೆ ತನ್ನ ನಿಷ್ಪಕ್ಷಪಾತ ಮತ್ತು ನಿರ್ಭೀತ ನಿಲುವಿನೊಂದಿಗೆ ನಿಖರ ಮತ್ತು ಜನಪರ ಸುದ್ದಿ ನೀಡುತ್ತ ನಿತ್ಯ ನಿರಂತರವಾಗಿ ಹಾಗೂ ಸದೃಢವಾಗಿ ಮುನ್ನಡೆಯಲಿದೆ.
ಸಾರ್ವಜನಿಕ ಜೀವನದಲ್ಲಿ ರಾಜಕಾರಣದ ಇಚ್ಛಾಶಕ್ತಿಯ ಪಾತ್ರ ಎಲ್ಲಕ್ಕಿಂತಲೂ ದೊಡ್ಡದು. ಮೊದಲೇ ಹೇಳಿದಂತೆ ಸಂಕಷ್ಟಗಳ ಪರಿಹಾರಮಾರ್ಗವಾಗಿ ಇಷ್ಟು ವರ್ಷಗಳೂ ಮಾಧ್ಯಮ ನನ್ನ ಆಯ್ಕೆಯಾಗಿತ್ತು. ಈಗ ಸಾರ್ವಜನಿಕ ಸೇವೆಯ ಬಹುದೊಡ್ಡ ಸಾಧ್ಯತೆ ಇರುವ ರಾಜಕಾರಣಕ್ಕೆ ಹೆಜ್ಜೆ ಇಡುತ್ತಿದ್ದೇನೆ. ನನಗೆ ದೇಶ ಮೊದಲು. ರಾಷ್ಟ್ರೀಯತೆಯನ್ನು ಸದಾ ಪ್ರತಿಪಾದಿಸುತ್ತಲೇ ಬಂದಿರುವ ನಾನು ಅದಕ್ಕೆ ಪೂರಕವಾದ ಪಕ್ಷವನ್ನು ಆರಿಸಿಕೊಂಡಿದ್ದೇನೆ. ಪ್ರಜಾಪ್ರಭುತ್ವದ ಬಗ್ಗೆ ಇನ್ನಿಲ್ಲದ ಗೌರವ ಹೊಂದಿರುವ ನಾನು, ಅದಕ್ಕೆ ಧಕ್ಕೆಯಾಗದ ಹಾಗೆ, ಅದರ ಘನತೆಯನ್ನು ಹೆಚ್ಚಿಸುವ ಹಾಗೆ ಮುಂದಿನ ಹೆಜ್ಜೆಗಳನ್ನು ಇಡಲಿದ್ದೇನೆ.
ಒಬ್ಬ ಪತ್ರಕರ್ತನಾಗಿ ಇಷ್ಟು ವರ್ಷಗಳ ಕಾಲ ಪ್ರೀತಿ ಕೊಟ್ಟ ನಾಡಿನ ಜನತೆ, ನನ್ನ ಓದುಗರು, ವೀಕ್ಷಕರು. ನನ್ನೆಲ್ಲಾ ಹಿತೈಷಿಗಳು ನನ್ನ ಈ ಆಯ್ಕೆಯನ್ನೂ ಅಷ್ಟೇ ಪ್ರೀತಿ , ಗೌರವ , ವಿಶ್ವಾಸದಿಂದ ಸ್ವಾಗತಿಸುತ್ತೀರೆಂದು ನಂಬಿದ್ದೇನೆ. ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ನಡೆಯುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ.
ದಾರಿ ಬೇರೆ. ಉದ್ದೇಶ ಒಂದೇ.
ಆದರೂ…ನಾನು ಕನಸು ಕಂಡು ಈವರೆಗೆ ನಡೆದು ಬಂದ, ಎಷ್ಟೆಲ್ಲಾ ಸಮೃದ್ಧ ಅನುಭವಗಳನ್ನು ಬದುಕಿಗೆ ಕೊಟ್ಟ ಮಾಧ್ಯಮ ಕ್ಷೇತ್ರವನ್ನು ತೊರೆಯುವಾಗ ನನಗೂ ಮನಸ್ಸು ಭಾರವಾಗುತ್ತಿದೆ. ಪ್ರಯೋಗಶೀಲತೆಯೇ ಮೂಲಗುಣವಾದ ನನಗೆ ಹೊಸದಾರಿಯೂ ಅಷ್ಟೇ ಅನಿವಾರ್ಯವಾಗಿದೆ.
ಈವರೆಗೆ ಕ್ರಮಿಸಿದ ಹಾದಿಯಲ್ಲಿ ಸಹಕರಿಸಿದ ಎಲ್ಲರನ್ನೂ ಮತ್ತೊಮ್ಮೆ ನೆನೆಯುತ್ತಾ ಬೀಳ್ಕೊಡುತ್ತಿದ್ದೇನೆ.
ಮತ್ತು ನನ್ನ ಮೇಲೆ ಭರವಸೆ ಇಟ್ಟು ಹೊಸ ಜವಾಬ್ದಾರಿ ಹೊರಿಸಿರುವ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಧನ್ಯವಾದ ಹೇಳುತ್ತಾ ಹೊಸನಂಬಿಕೆ ಮತ್ತು ಎಲ್ಲರ ಹಿತದ ಹೊಸ ಕನಸುಗಳೊಂದಿಗೆ ಹೊಸ ಪ್ರಯಾಣಕ್ಕೆ ಹೆಜ್ಜೆ ಇಡುತ್ತಿದ್ದೇನೆ.
ಎಂದಿನಂತೆ ಜೊತೆಗಿರುತ್ತೀರೆಂದು ನಂಬಿದ್ದೇನೆ.
– ನಿಮ್ಮ
ಹರಿಪ್ರಕಾಶ ಕೋಣೆಮನೆ.

 

 

Leave a Reply

Your email address will not be published. Required fields are marked *

error: Content is protected !!