ಬಡವರು ಬಡವರಾಗಿಯೇ ಉಳಿಯಬೇಕಾ? ; ಟೀಕಾಕಾರರಿಗೆ ತಿರುಗೇಟು ನೀಡಿದ ಶಾಸಕ ಕೆ.ಎಸ್.‌ ಆನಂದ್‌

ಸುದ್ದಿಕಡೂರು : ಬಡವರು ಬಡವರಾಗಿಯೇ ಉಳಿದು ಶ್ರೀಮಂತ ವರ್ಗದ ಮನೆಯ ಕೆಲಸದಾಳುಗಳಾಗಿರಬೇಕೆಂಬ ಕಲ್ಮಷದ ಮನಸ್ಥಿತಿಯಿಂದ ಟೀಕಾಕಾರರು ಹೊರಬರಬೇಕಿದೆ. ರಾಜ್ಯ ಸರಕಾರ ಅನುಷ್ಟಾನಗೊಳಿಸಿದ ಐದು ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲ್ಲೂಕಿನ ಹಿರೇನಲ್ಲೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಜಾರಿ ಮಾಡಲು ಸಾಧ್ಯವಿಲ್ಲವೆಂದವರು ಯೋಜನೆ ಜಾರಿಯಾಗುತ್ತಿದ್ದಂತೆ ದೇಶ ದಿವಾಳಿಯಾಗುತ್ತದೆ ಎಂದು ಟೀಕಿಸುತ್ತಾರೆ. ಆದರೆ ಕೇಂದ್ರ ಸರಕಾರ ದೊಡ್ಡ ಉದ್ಯಮಿಗಳ 4 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದಾಗ ಇಂದಿನ ವಿಪಕ್ಷಗಳು ಯಾರೂ ಕೂಡ ತುಟಿ ಬಿಚ್ಚಲಿಲ್ಲ. ಬಡವರಿಗೆ ಸವಲತ್ತುಗಳನ್ನು ನೀಡಿದರೆ ದೇಶ ದಿವಾಳಿಯಾಗುತ್ತದೆ ಎನ್ನುವ ಸಂಕುಚಿತ ಮನೋಭಾವದಿಂದ ಟೀಕಾಕರರು ಹೊರಬರಬೇಕು. ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ. ಬಡವರು ತಾತ ಮುತ್ತಾತನ ಕಾಲದಿಂದ ಇನ್ನೊಬ್ಬರ ಮನೆಯಲ್ಲಿ ಕೂಲಿ ಮಾಡಿದ್ದಾರೆ. ಅವರೊಂದಿಷ್ಟು ದಿನ ಸುಖವಾಗಿರಲಿ ಎನ್ನುವ ಕಾರಣಕ್ಕಾಗಿಯೇ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದುದರಿಂದ ಉಳ್ಳವರು ತಮ್ಮ ಮನೆಯ ಕೆಲಸಗಳನ್ನು ತಾವೇ ಮಾಡಿಕೊಂಡರೆ ಬಡವರ ಕಷ್ಟ ಅರಿವಾಗುತ್ತದೆ ಎಂದು ತಿರುಗೇಟು ನೀಡಿದರು.

ತಹಸೀಲ್ದಾರ್ ಎಂ.ಪಿ.ಕವಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಒ ಸಿ.ಆರ್.ಪ್ರವೀಣ್, ಬಿಸಿಲೆರೆ, ಹಿರೇನಲ್ಲೂರು, ಕಾಮನಕೆರೆ, ಗಿರಿಯಾಪುರ, ಬಾಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಣುಕಮ್ಮ, ಎನ್.ಆರ್.ಗಿರೀಶ್, ಡಿ.ಎಂ.ಶೇಖರ್, ಸಿ.ಎಂ.ಸುಧಾ, ಹೆಚ್.ಕವಿತ, ಸಿಡಿಪಿಒ ಶಿವಪ್ರಕಾಶ್, ಆಹಾರನಿರೀಕ್ಷಕರಾದ ಶಿಲ್ಪಾ, ಶ್ರೀನಿವಾಸ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!