ಶ್ರೀಗಂಧ ಕದ್ದು ತಲೆಮರೆಸಿಕೊಂಡಿದ್ದ ಆರೋಪಿಯ ಎಡೆಮುರಿಕಟ್ಟಿದ ಯಗಟಿಪೊಲೀಸರು

ಸುದ್ದಿ ಕಡೂರು : ತಾಲ್ಲೂಕಿನ ಕೇದಿಗೆರೆ ಗ್ರಾಮದ ಜಮೀನನಲ್ಲಿ ಸುಮಾರು 3 ಲಕ್ಷ ಬೆಲೆಬಾಳುವ 12 ಶ್ರೀಗಂಧದ ತುಂಡುಗಳನ್ನು ದೋಚಿ ಪರಾರಿಯಾಗಿ ಆರೇಳು ತಿಂಗಳನಿ0ದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಯಗಟಿ ಪೊಲೀಸರು ಎಡೆಮುರಿಕಟ್ಟಿ ನ್ಯಾಯಾಂಗ ಬಂಧನಕ್ಕೆ ಶನಿವಾರ ಒಪ್ಪಿಸಿದ್ದಾರೆ.
ಬುಕ್ಕಾಂಬೂದಿ ಸಮೀಪದ ಬಿಲ್ಲಹಳ್ಳಿ ಗ್ರಾಮದ ರಿಜ್ವಾನ್ ಬಂಧಿತ ಆರೋಪಿಯಾಗಿದ್ದು, ಕಳೆದ 2023ರ ಜುಲೈ 8 ಮತ್ತು ಆಗಸ್ಟ್ 2ರಂದು ತಡರಾತ್ರಿ ಕೇದಿಗೆರೆ ಗ್ರಾಮದ ಹರಕುಮಾರ್ ಹೆಸರಿನ ಜಮೀನನಲ್ಲಿ ಬೆಳೆಯಲಾಗಿದ್ದ ಶ್ರೀಗಂಧವನ್ನು ತುಂಡರಿಸಿಕೊ0ಡು ದೋಚಿದ್ದಾನೆ. ಈ ಕುರಿತಾಗಿ ಗಿರಿಯಾಪುರದ ವಾಸಿ ಜಿ.ಕೆ. ರಾಜಕುಮಾರ್ ಯಗಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಬೇಧಿಸಲು ಜಿಲ್ಲಾ ಎಸ್ಪಿ ಡಾ. ವಿಕ್ರಮ್ ಅಮಟೆ ಮತ್ತು ಡಿವೈಎಸ್ಪಿ ಹಾಲಮೂರ್ತಿರಾವ್ ನಿರ್ದೇಶನದೊಂದಿಗೆ ಬೀರೂರು ಸಿಪಿಐ ಶ್ರೀಕಾಂತ್ ಮತ್ತು ಯಗಟಿ ಪಿಎಸೈ ಎನ್. ರಂಗನಾಥ್ ನೇತೃತ್ವದ ತಂಡವು ಕಾರ್ಯಚರಣೆ ನಡೆಸಿ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಬಂಧಿತ ಆರೋಪಿತ ವ್ಯಕ್ತಿಯಿಂದ 1,75 ಲಕ್ಷ ಮೌಲ್ಯದ 35ಕೆಜಿ ತೂಕದ 7 ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯ ಬಗ್ಗೆ ಶಿವಮೊಗ್ಗ ಮತ್ತು ಅಜ್ಜಂಪುರ ಠಾಣೆಗಳಲ್ಲಿ ವಿವಿಧ ಪ್ರಕರಣಗಳಡಿ ದೂರುದಾಖಲಾಗಿರುವುದಾಗಿ ತಿಳಿದು ಬಂದಿದೆ.
ತನಿಖೆಯ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಮಹೇಶ್ವರಪ್ಪ, ಉಮೇಶ್, ಪ್ರದೀಪ್, ಸಿದ್ದೇಶ್, ಕಿರಣ್‌ಕುಮಾರ್, ಶ್ರೀನಿವಾಸ್, ಕಿರಣ್ ತಾಂತ್ರಿಕ ವಿಭಾಗದ ನಯಾಜ್, ರಬಾನಿ ತಂಡದಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!