ಮಾ.4 ರಿಂದ ಕೊಬ್ಬರಿ ನೊಂದಣಿ ಪ್ರಕ್ರಿಯೆಗೆ ಪುನಾರಂಭ

ಸುದ್ದಿ ಕಡೂರು : ನಾಫೆಡ್‌ನಿಂದ ಕೊಬ್ಬರಿ ಖರೀದಿಗಾಗಿ ಆರಂಭದಲ್ಲಿ ನಡೆದ ರೈತರ ನೊಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ನೊಂದಣಿಗಳು ನಡೆದ ಹಿನ್ನಲೆಯಲ್ಲಿ ರಾಜ್ಯ ಸರಕಾರ ನೊಂದಣಿ ಪ್ರಕ್ರಿಯೆಯನ್ನು ರದ್ದುಪಡಿಸಿ ಮರು ನೊಂದಣಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದು. ಫೆಬ್ರವರಿ ತಿಂಗಳು ಕಳೆದರೂ ಆರಂಭಗೊಳ್ಳದ ನೊಂದಣಿಗೆ ಮಾ.4ರಿಂದ ಮರು ನೊಂದಣಿಗೆ ಚಾಲನೆ ಸಿಗಲಿದೆ.

ಕೊಬ್ಬರಿ ಖರೀದಿ ನೊಂದಣಿಗೆ ಬಳಸುವ ಸಾಫ್ಟವೇರ್ ಅನ್ನು ಎನ್‌ಐಸಿ ಸಂಸ್ಥೆ ನೂತನವಾಗಿ ಸಿದ್ದಪಡಿಸಿದ್ದು ಒಂದು ಕಂಪ್ಯೂಟರ್‌ಗೆ ಬಳಸುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಇನ್ನೊಂದು ಕಂಪ್ಯೂಟರ್‌ನಲ್ಲಿ ಬಳಸಲು ಬಾರದಂತೆ ಲಾಕ್ ಮಾಡಲಾಗುತ್ತಿದೆ. ಇದಲ್ಲದೆ ಒಮ್ಮೆ ಒಂದು ಕಂಪ್ಯೂಟರ್‌ನಲ್ಲಿ ಲಾಗಿನ್ ಆದರೆ ಖರೀದಿ ಅಧಿಕಾರಿಯ ಮೊಬೈಲ್‌ಗೆ ಒಟಿಪಿ ಬರಲಿದೆ. ಇದರಿಂದ ಬಹುತೇಕ ಅಕ್ರಮಗಳನ್ನು ತಡೆಗಟ್ಟಿದಂತಾಗಿದ್ದು,

ಹೊಸ ಸಾಫ್ಟವೇರ್‌ನಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ಒಂದು ಜಿಲ್ಲೆಯ ರೈತ ಇನ್ನೊಂದು ಜಿಲ್ಲೆಗೆ ಹೋಗಿ ನೊಂದಣಿ ಮಾಡಿಸಲು ಸಾಧ್ಯವಾಗುವುದಿಲ್ಲ. ಆದರೆ ಒಂದೇ ಜಿಲ್ಲೆಯಲ್ಲಿ ಯಾವುದೇ ತಾಲ್ಲೂಕಿನಲ್ಲಿ ಬೇಕಾದರೂ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ. ನೊಂದಣಿ ಮಿತಿ ಪ್ರತಿ ರೈತರಿಗೆ 20 ರಿಂದ 15 ಕ್ವಿಂಟಾಲ್‌ಗೆ ಬದಲಾಯಿಸಲಾಗುತ್ತಿದೆ. ನೊಂದಣಿ ಪ್ರಕ್ರಿಯೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಚಿಕ್ಕಮಗಳೂರು, ಕಡೂರು, ಬೀರೂರು, ಪಂಚನಹಳ್ಳಿ, ಅಜ್ಜಂಪುರ ಹಾಗೂ ತರೀಕೆರೆ ಎಪಿಎಂಸಿ ಕೇಂದ್ರಗಳಲ್ಲಿ ಕಂಪ್ಯೂಟರ್, ಪ್ರಿಂಟರ್ ಸ್ಕಾö್ಯನರ್, ಡಾಂಗಲ್, ಸ್ಟೇಷನರಿಗಳನ್ನು ಸಿದ್ದಪಡಿಸಲಾಗುತ್ತಿದೆ.

ಕಡೂರು ಎಪಿಎಂಸಿ ಕೇಂದ್ರದಲ್ಲಿ ಪ್ರಾರಂಭದಲ್ಲಿ 2100 ರೈತರಿಂದ 32,200ಕ್ವಿಂಟಾಲ್‌ನಷ್ಟು ಕೊಬ್ಬರಿ ಖರೀದಿ ನೊಂದಣಿಯಾಗಿತ್ತು. ಇದೀಗ ಸರಕಾರ ಹೊಸದಾಗಿ ಸಾಫ್ಟವೇರ್ ಅಳವಡಿಸಿರು ಹಿನ್ನಲೆಯಲ್ಲಿ ಹೊಸ ನೊಂದಣಿಗೆ ಅವಕಾಶ ನೀಡಿದೆ. ಮಾ.4ರಿಂದ ನೊಂದಣಿ ಪ್ರಕ್ರಿಯೆಯನ್ನು ಆರಂಭಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸಿಬ್ಬಂದಿಗಳಿಗೆ ಹೊಸಸಾಫ್ಟವೇರ್‌ನಲ್ಲಿನ ಮಾಹಿತಿಯ ಬಗ್ಗೆ ಅಗತ್ಯ ತರಬೇತಿಯನ್ನು ನೀಡಲಾಗಿದ್ದು, ರೈತರು ಆತಂಕಪಟ್ಟುಕೊಳ್ಳದೆ ತಮ್ಮ ಆಧಾರ್‌ನೊಂದಿಗೆ ಎಫ್‌ಐಡಿ ಸಂಖ್ಯೆಯ ಮಾಹಿತಿ ನೀಡಿ ನೊಂದಣಿ ಮಾಡಿಸಿಕೊಳ್ಳಬೇಕಿದೆ ಎಂದು ಕೊಬ್ಬರಿ ಖರೀದಿ ಕೇಂದ್ರದ ಅಧಿಕಾರಿ ಎ.ರಾಘವೇಂದ್ರ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!