ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಖಂಡುಗದಹಳ್ಳಿ ಶ್ರೀ ಸೋಮೇಶ್ವರ ಸ್ವಾಮಿ ರಥೋತ್ಸವ

ಸುದ್ದಿಕಡೂರು : ಮಹಾಶಿವರಾತ್ರಿಯ ಪ್ರಯುಕ್ತ ತಾಲ್ಲೂಕಿನ ಪ್ರಸಿದ್ದ ಶ್ರೀ ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿಯ ರಥೋತ್ಸವವು ಶನಿವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಪ್ರತಿವರ್ಷದಂತೆ ಮಹಾಶಿವರಾತ್ರಿ ಹಬ್ಬದ ನಂತರ ದಿನದಲ್ಲಿ ನಡೆಯುವ ಸ್ವಾಮಿಯ ರಥೋತ್ಸವವು, ಬೆಳಿಗ್ಗೆ ದೇವಾಲಯದ ಪ್ರಧಾನ ಗುರುಗಳಾದ ಶಿವು ನೇತೃತ್ವದಲ್ಲಿ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ನಡೆಸಲಾಯಿತು. ನಂತರ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಟಾಪಿಸಿ ದೇವಸ್ಥಾನದ ಆವರಣದಲ್ಲಿ ರಥೋತ್ಸವ ನಡೆಸಲಾಯಿತು.
ಶಾಸಕ ಕೆ.ಎಸ್.ಆನಂದ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಲ್ಲಾ ವರ್ಗದ ಅಸಂಖ್ಯಾತ ಭಕ್ತರನ್ನು ಹೊಂದಿರುವ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಯಾತ್ರಿನಿವಾಸ, ಸಿಸಿರಸ್ತೆ ನಿರ್ಮಾಣ ಸೇರಿದಂತೆ ಕೈಗೊಳ್ಳುವ ಅಭಿವೃದ್ದಿ ಕಾರ್ಯಗಳಿಗೆ ಅಗತ್ಯ ಅನುದಾನ ದೊರಕಿಸಿಕೊಡುವ ಮೂಲಕ ಅಭಿವೃದ್ದಿಗೆ ಒತ್ತು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಂಗಯ್ಯ ಭೃಂಗಿಗಳ ವಂಶಸ್ಥರಿ೦ದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಎಲ್ಲರ ಗಮನಸೆಳೆದವು. ಸ್ವಾಮಿಯ ರಥೋತ್ಸವದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ದೇವಾಲಯದ ಧರ್ಮದರ್ಶಿ ಕೆ.ಬಿ. ಸೋಮೇಶ್, ಸರಸ್ವತಿಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್, ಯಳ್ಳಂಬಳಸೆ ಗ್ರಾಪಂ ಉಪಾಧ್ಯಕ್ಷೆ ಪುಷ್ಪಲತಾ ಸೋಮೇಶ್, ಪುರಸಭಾ ಸದಸ್ಯ ಈರಳ್ಳಿ ರಮೇಶ್, ಮಂಜು, ಸೋಮಶೇಖರ್, ಹರೀಶ್, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!