ಅಂಚೆಚೋಮನಹಳ್ಳಿ ಗೇಟ್‌ಲ್ಲಿರೋ ಮದ್ಯದಂಗಡಿ ಬಂದ್‌ ಮಾಡ್ಸಿ: ಗ್ರಾಮದ ಮಹಿಳೆಯರ ಆಗ್ರಹ

ಸುದ್ದಿಕಡೂರು : ಸುತ್ತಮುತ್ತಲ ಗ್ರಾಮಸ್ಥರ ವ್ಯಾಪಕ ವಿರೋಧದ ನಡುವೆಯೂ ಅಂಚೆಚೋಮನಹಳ್ಳಿ ಗೇಟ್‌ಬಳಿಯ ಜನವಸತಿ ಪ್ರದೇಶದಲ್ಲಿ ತೆರೆಯಲಾಗಿರುವ ಮದ್ಯದಂಗಡಿಯನ್ನು ಸಂಪೂರ್ಣ ಮುಚ್ಚುವಂತೆ ಆಗ್ರಹಿಸಿ ಕೆರೆಸಂತೆ ಗ್ರಾಪಂ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸೋಮವಾರ ಮದ್ಯದಂಗಡಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಸುತ್ತಮುತ್ತಲ ಗ್ರಾಮದ ಮಹಿಳೆಯರು ಹಾಗು ಶಾಲಾಕಾಲೇಜುಗಳ ವಿದ್ಯಾರ್ಥಿಗಳು ತೆರಳುವ ಮಾರ್ಗದಲ್ಲಿ ಮದ್ಯದಂಗಡಿಯನ್ನು ಆರಂಭಿಸಲಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಅಬಕಾರಿ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿರುವುದು ಖಂಡನೆ ವ್ಯಕ್ತಪಡಿಸಿ ಮದ್ಯದಂಗಡಿಯ ಪರವಾನಗಿಯನ್ನು ರದ್ದುಪಡಿಸಿ ಗ್ರಾಮದಲ್ಲಿ ಆರೋಗ್ಯಕರ ವಾತಾವರಣವನ್ನು ಅಧಿಕಾರಿಗಳು ನಿರ್ಮಿಸಿಕೊಡಬೇಕಿದೆ. ಈ ಭಾಗದಲ್ಲಿ ಕೂಲಿಕಾರ್ಮಿಕ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದಲ್ಲಿ ಕುಡಿತದ ಆಮಿಷಕ್ಕೆ ಬಲಿಯಾಗಿ ಕುಟುಂಬದ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಂಬAಧಿಸಿದ ಅಧಿಕಾರಿಗಳು ಮದ್ಯದಂಗಡಿಯನ್ನು ತೆರವುಗೊಳಿಸಿಕೊಡುವಂತೆ ಎಂದು ಅಂಚೆಚೋಮನಹಳ್ಳಿ, ಕೆರೆಸಂತೆ, ಬಾಪೂಜಿಕಾಲನಿ, ಮಲ್ಲಪ್ಪನಹಳ್ಳಿ, ಲಿಂಗ್ಲಾಪುರ, ಸಂತೆಕೆರೆಹಳ್ಳಿ, ಸೇವಾನಗರ, ನಂಜಪ್ಪನಹಳ್ಳಿ ಸೇರಿದಂತೆ ಸುತ್ತಮುತ್ತಲ ಭಾಗದ ಮಹಿಳೆಯರು ಒತ್ತಾಯಿಸಿ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಂ.ಪಿ.ಕವಿರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆರೆಸಂತೆ ಗ್ರಾಪಂ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷೆ ರೇಣುಕಮ್ಮಮಂಜಪ್ಪ, ಸದಸ್ಯರಾದ ನಾರಾಯಣಪ್ಪ, ಸವಿತಾ ಪ್ರಸನ್ನಕುಮಾರ್, ವಂದನಾಬಾಯಿ, ಮಹ್ಮದ್‌ನವೀದ್, ಮುಖಂಡರಾದ ಅಂಚೆಚೋಮನಹಳ್ಳಿ ಮಂಜು, ಮಲ್ಲಪ್ಪನಹಳ್ಳಿ ಪುಟ್ಟಪ್ಪ, ಎಲ್.ಎಂ. ಪರಮೇಶ್ವರಪ್ಪ, ಆದರ್ಶ್ ಮಲ್ಲಿಕಾರ್ಜುನ್, ಜಯಣ್ಣ, ನವೀನ್, ರವಿನಾಯ್ಕ್, ಪಾಂಡು, ಶ್ರೀನಿವಾಸ್ ಮತ್ತಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!