ಕಾಫಿನಾಡಿನಲ್ಲಿ ಶಾಂತಿಯುತವಾಗಿ ಸಂಪನ್ನಗೊಂಡ ದತ್ತಮಾಲೆ ಅಭಿಯಾನ

ಸುದ್ದಿ ಚಿಕ್ಕಮಗಳೂರು : ಕಳೆದೊಂದು ವಾರದಿಂದ ಶ್ರೀರಾಮಸೇನಾ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನಕ್ಕೆ ಭಾನುವಾರ ಶಾಂತಿಯುತವಾಗಿ ಸಂಪನ್ನಗೊಂಡಿತು. ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಸಾವಿರಾರು ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದು ಪುನೀತರಾದರು. ಇದೇ ವೇಳೆ ದೇವಾಲಯದ ಹೊರಭಾಗದಲ್ಲಿ ಹೋಮ-ಹವನ ನಡೆಸಿ, ದತ್ತಪೀಠ ಹಿಂದೂಗಳದ್ದೆ ಎಂದು ಆಗ್ರಹಿಸಿದ ದತ್ತಭಕ್ತರು, ಸರ್ಕಾರ ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಘೋಷಿಸಬೇಕೆಂದು ಆಗ್ರಹವ್ಯಕ್ತಪಡಿಸಿದರು.

ಮೊಳಗಿದ ಜೈ ಶ್ರೀರಾಮ್ ಘೋಷಣೆ :

ಜೈ ಶ್ರೀರಾಮ್ ಅನ್ನೋ ಘೋಷಣೆ. ದತ್ತಪೀಠ ನಮ್ಮದೆಂಬ ಘೋಷಣೆ. ಪೋಲಿಸರ ಸರ್ಪಗಾವಲು. ಇದೆಲ್ಲಾ ಕಂಡು ಬಂದದ್ದು ಕಳೆದೊಂದು ವಾರದಿಂದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನದ ಮುಕ್ತಾಯದ ದಿನವಾವಾದ ಇಂದು. ಸರ್ಕಾರ ಮುಸ್ಲಿಮರ ಓಲೈಕೆ ಮುಂದಾಗಿದೆ ದಾಖಲಾತಿಗಳನ್ನ ಕೂಲಂಕುಶವಾಗಿ ಪರಿಶೀಲಿಸಿ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹ ಎಂದಿನಂತೆ ಜೋರಾಗಿತ್ತು. ದತ್ತಪೀಠ ಸಂಪೂರ್ಣ ಹಿಂದುಗಳ ಪೀಠವಾಗಬೇಕು. ಸರ್ಕಾರ ಒಂದು ವೇಳೆ ದತ್ತಪೀಠ ಎಂಬ ನಾಮಫಲಕವನ್ನ ಬದಲಿಸಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ದತ್ತಭಕ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ. ಹಿಂದೂಗಳ ಪೂಜೆಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಪೂಜೆಯಲ್ಲಿ ಏನೇನು ನಡೀತು? :  ಬೆಳಗ್ಗೆ ನಗರದ ಶಂಕರಮಠದಲ್ಲಿ ಧರ್ಮ ಸಭೆ ನಡೆಸಿ ಶಾರದಾಂಬೆ ದೇಗುಲದಿಂದ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ದತ್ತಪೀಠಕ್ಕೆ ತೆರಳಿ ಹೋಮ-ಹವನ ನಡೆಸಿದ್ರು. ಮಾಲಾಧಾರಿಗಳ ಜೊತೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ವಿವಿಧ ಮಠಗಳ ಸ್ವಾಮೀಜಿಗಳು, ದತ್ತಪೀಠವನ್ನ ಹಿಂದುಗಳಿಗೆ ಒಪ್ಪಿಸಬೇಕು. ಇಲ್ಲವಾದ್ರೆ, ಸರ್ಕಾರದ ವಿರುದ್ಧ ಹೋರಾಡೋದಾಗಿ ಎಚ್ಚರಿಸಿದ್ರು. ಐದು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದ ದತ್ತಮಾಲಾ ಅಭಿಯಾನಕ್ಕೆ ನಗರದಾದ್ಯಂತ ಹಾಗೂ ದತ್ತಪೀಠ ಆವರಣದಲ್ಲಿ ಪೊಲೀಸ್ ಇಲಾಖೆ ಕೂಡ ಸಾಕಷ್ಟು ಬಿಗಿ ಭದ್ರತೆ ಏರ್ಪಡಿಸಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ 2000ಕ್ಕೂ ಅಧಿಕ ಪೊಲೀಸರು ದತ್ತಪೀಠ ಹಾಗೂ ನಗರದಾದ್ಯಂತ ಬಂದೋಬಸ್ತ್ ಕಲ್ಪಿಸಿದ್ದರು.

Leave a Reply

Your email address will not be published. Required fields are marked *

error: Content is protected !!