ವಸತಿ ಶಾಲೆಯಲ್ಲಿ ಭಯದ ಮುಕ್ತ ವಾತಾವರಣ ಕಲ್ಪಿಸಿ – ಜಿಪಂ ಸಿಇಒ ಡಾ. ಗೋಪಾಲಕೃಷ್ಣ

ಸುದ್ದಿಕಡೂರು : ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಭಯದ ವಾತಾವರಣವನ್ನು ಮುಕ್ತಗೊಳಿಸಿ ಶೈಕ್ಷಣಿಕ ವ್ಯಾಸಂಗದ ಕಡೆ ಹೆಚ್ಚು ಒತ್ತುಕೊಡುವಂತೆ ನಿಲಯದ ಶಿಕ್ಷಕರು ಆದ್ಯತೆ ನೀಡಬೇಕಿದೆ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ತಿಳಿಸಿದರು.
ತಾಲ್ಲೂಕಿನ ಕುಪ್ಪಾಳು ಮೂರಾರ್ಜಿ ವಸತಿ ಶಾಲೆಗೆ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುವಾರ ಭೇಟಿ ನೀಡಿ ಸ್ಥಳೀಯ ಗ್ರಾಮಸ್ಥರು ಹಾಗೂ ಶಾಲೆಯ ಭೋಧಕ ವರ್ಗದವರೊಡನೆ ನಡೆದ ಸಭೆಯಲ್ಲಿ ಮಾತನಾಡಿ, ಈ ಶಾಲೆಗೆ ಒಳ್ಳೆಯ ಹೆಸರಿದೆ. ಪ್ರತೀ ವರ್ಷವೂ ಅತ್ಯುತ್ತಮ ಫಲಿತಾಂಶ ಹೊರಬರುತ್ತಿದೆ. ಅದೇ ಫಲಿತಾಂಶ ಮುಂದುವರೆಯಬೇಕೆAಬ ಧ್ಯೇಯ ನಿಮ್ಮೆಲ್ಲರದ್ದಾಗಬೇಕು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು. ಯಾವುದೇ ರೀತಿಯ ಬೇಜವಾಬ್ದಾರಿ ನಡವಳಿಕೆ ಸಹಿಸುವುದಿಲ್ಲ. ಎಲ್ಲ ಪೋಷಕರಿಗೆ ಸೂಚನೆ ನೀಡಿ ಶನಿವಾರ ಪೋಷಕರ ಸಭೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಮಸ್ಯೆಗಳು ಏನೇ ಇದ್ದರೂ ಮುಕ್ತವಾಗಿ ಹಂಚಿಕೊಳ್ಳಿ, ಒಂದೆರಡು ದಿನಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳು ಬದಲಾವಣೆಗೊಳ್ಳಬೇಕಿದೆ. ಜೊತೆಯಲ್ಲಿ ಕಾವಲುಗಾರರ ಬದಲಿ ವ್ಯವಸ್ಥೆ ಮಾಡಬೇಕಿದೆ. ಶಾಲೆಯಲ್ಲಿ ವಾರ್ಡನ್ ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ. ಹಾಸ್ಟೆಲ್ ಸುತ್ತಮುತ್ತಲು ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಪರಿಶೀಲಿಸಿಕೊಳ್ಳಬೇಕು. ಯಾವುದೇ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಾಕೀತು ಮಾಡಿದರು.
ಇಲ್ಲಿ ಕೆಲ ಘಟನೆಗಳು ನಡೆದಿದ್ದು, ತನಿಖೆ ನಡೆಯಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ. ಈ ಶಾಲೆಯಲ್ಲಿ ಹೊರಗುತ್ತಿಗೆ ನೌಕರರದೇ ಪಾರುಪತ್ಯವಿದೆಯೆಂಬ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಇಲ್ಲಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ಪ್ರಾಂಶುಪಾಲರನ್ನು ಸಹ ಇಲ್ಲಿಂದ ವರ್ಗ ಮಾಡಲಾಗಿದೆ. ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಲ್ಲಿನ ಘಟನೆಗಳ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದ್ದು, ನೊಂದವರಿಗೆ ನ್ಯಾಯ ದೊರೆಯುವುದರಲ್ಲಿ ಯಾರಿಗೂ ಸಂಶಯ ಬೇಡ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ. ಸೋಮಶೇಖರ್, ನಾಗೇಶ್, ಶಿವಕುಮಾರ್, ಪಿಡಿಒ ಹನುಮಂತಪ್ಪ, ಪ್ರಾಂಶುಪಾಲೆ ಶೈಲಾ, ಮೇಲ್ವಿಚಾರಕಿ ಗೀತಾಂಜಲಿ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!