ಗುಜ್ಜೇನಹಳ್ಳಿ ಗ್ರಾಮದೇವತೆ ಆಲಮರದಮ್ಮ ಮತ್ತು ಲಕ್ಷ್ಮೀದೇವಿ ದೇವಾಲಯ ಪ್ರಾರಂಭೋತ್ಸವ

ಸುದ್ದಿ ಕಡೂರು: ಧಾರ್ಮಿಕ ಮನೋಭಾನನೆ ಉದ್ದೀಪಿಸಲು ದೇವಸ್ಥಾನಗಳು ಅವಶ್ಯಕವಾಗಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲ್ಲೂಕಿನ ಗುಜ್ಜೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಆಲಮರದಮ್ಮ ಮತ್ತು ಲಕ್ಷ್ಮಿ ದೇವಿ ದೇವಸ್ಥಾನದ ಪ್ರವೇಶೋತ್ಸವ ಮತ್ತು ಕಳಶಾರೋಹಣ ಕಾರ್ಯಕ್ರಮದ ಧಾರ್ಮಿಕ ಸಭೆ ಉದ್ಘಾಟಿಸಿ  ಮಾತನಾಡಿದರು.

ದೇವಸ್ಥಾನಗಳು ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುವ ಮತ್ತು ಸ್ಥೈರ್ಯ ನೀಡುವ ತಾಣಗಳಾಗಿವೆ. ಗ್ರಾಮೀಣ ಭಾಗಗಳಲ್ಲಿ ಧಾರ್ಮಿಕ ಭಾವನೆಗಳು ಜನಜೀವನದಲ್ಲಿ ಬೆರೆತುಹೋಗಿವೆ. ದೈವದ ಬಗೆಗಿನ ನಂಬಿಕೆಯೇ ಜೀವನ ಸರಿದಾರಿಯಲ್ಲಿರಲು ಕಾರಣವಾಗಿದೆ.ಈ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಭಧ್ರಾ ಯೋಜನೆಯ ವಿಚಾರದಲ್ಲಿ ಕಾಲುವೆ ಹಾದುಹೋಗುವ ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ಉಪ್ಪಾರ ಸಮುದಾಯ ಭವನಕ್ಕೆ ತಮ್ಮ ಇತಿಮಿತಿಯಲ್ಲಿ ಸಹಕಾರ ನೀಡುತ್ತೇನೆ. ಈ ಗ್ರಾಮದಲ್ಲಿ ಸಮಯದಾಯ ಭವನವನ್ನು ನನ್ನ ಅವಧಿಯಲ್ಲೆ ನಿರ್ಮಿಸಿಕೊಡುವ ಭರವಸೆ ನನ್ನದಾಗಿದೆ. ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಪ್ರಮುಖ ಆಶಯವಾಗಿದೆ. ಉಪ್ಪಾರ ಸಮುದಾಯದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಧಾರ್ಮಿಕ ಕಾರ್ಯಗಳು ನಡೆಯುವಂತೆಯೇ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಗಳೂ ಅಭಿವೃದ್ಧಿಯಾಗಬೇಕಾದ ಅಗತ್ಯವಿದೆ. ದೊಡ್ಡ ಗ್ರಾಮವಾದ ಗುಜ್ಜೇನಹಳ್ಳಿಗೆ ಕಂದಾಯ ಗ್ರಾಮದ ಮಾನ್ಯತೆ ಅಗತ್ಯವಿದೆ. ಶಾಸಕರು ತಮ್ಮ ಅವಧಿಯಲ್ಲಿ ಈ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿಸಲು ವಿಶೇಷ ಆಸಕ್ತಿ ವಹಿಸಿ ಕಾರ್ಯೋನ್ಮುಖವಾಗಬೇಕೆಂದು ಕೋರಿದರು.

ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ಉಪ್ಪಾರ ಸಮಾಜ ಅಭಿವೃದ್ಧಿಯಾಗಬೇಕೆಂದರೆ ಸಮಾಜದಲ್ಲಿ ಶೈಕ್ಷಣಿಕ ಅಭಿವೃದ್ಧಿಯಾಗಬೇಕಿದೆ. ಸಮಾಜದ ಸಮಯದಾಯ ಭವನದ ಕಾರ್ಯ ಆರಂಭವಾಗಿದೆ. ಶಾಸಕರ ಸಹಕಾರವನ್ನು ಸಮಾಜದ ಪರವಾಗಿ ಕೋರುತ್ತೇನೆ ಎಂದರು.

ಶುಕ್ರವಾರ ಬೆಳಿಗ್ಗೆ ಚಙಡಿಕಾಹೋಮದ ನಂತರ ನೂತನ ದೇವಸ್ಥಾನದ ಗೋಪುರಕ್ಕೆ ಕಳಶಾರೋಹಣವನ್ನು ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.ಕಾರ್ಯಕ್ರಮಕ್ಕೆ ಮುಗಳೀಕಟ್ಟೆ ಲಕ್ಷ್ಮೀನರಸಿಂಹ ಸ್ವಾಮಿ ಸೇರಿದಂತೆ ಸುತ್ತಮುತ್ತಲ ಗ್ರಾಮದೇವತೆಗಳನ್ನು ಕರೆತರಲಾಗಿತ್ತು. ಗ್ರಾಮದ ಹಿರಿಯ ತಿಪ್ಪೇಶಪ್ಪ, ಗ್ರಾಮಪಂಚಾಯಿತಿ ಅಧ್ಯಕ್ಷ ಜೆ.ಡಿ.ಶಂಕರಪ್ಪ ,ಎ.ಜಿ.ಗಿರೀಶ್, ದೊಣ್ಣೆಕೋರನಹಳ್ಳಿ ಉಮೇಶ್, ಸಾಣೇಹಳ್ಳಿ ರೇಣುಕಾರಾಧ್ಯ, ಕಲ್ಲೇಶಪ್ಪ,ಶಂಶೀರ್, ಈಶ್ವರಪ್ಪ, ಪುಟ್ಟಪ್ಪ,ಗೋವಿಂದಪ್ಪ, ಓಂ ಶಕ್ತಿ ಶ್ರೀನಿವಾಸ್ ಇದ್ದರು.

Leave a Reply

Your email address will not be published. Required fields are marked *

error: Content is protected !!