ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕಾರ್ಯವೈಖರಿಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ – ಕೆ.ಎಸ್.‌ ಆನಂದ್

ಸುದ್ದಿ ಕಡೂರು : ಮಹಿಳೆ ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದು ಶಾಸಕ ಕೆ.ಎಸ್.ಆನಂದ್ ಬಣ್ಣಿಸಿದರು.
ತಾಲ್ಲೂಕಿನ ಮಚ್ಚೇರಿ ಸಮೀಪದ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಪತಿಯ ದುಡಿಮೆಯಲ್ಲೇ ಮಹಿಳೆ ಸಂಸಾರವನ್ನು ನಿಭಾಯಿಸಬೇಕಿತ್ತು. ಈಗ ಕಾಲ ಬದಲಾಗಿದೆ. ಸಾಮಾಜಿಕ, ಆರ್ಥಿಕವಾಗಿ ಮುಂದಾಗಲು ಸಂಸ್ಥೆಯ ಕಾರ್ಯವೈಖರಿಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದಂತಾಗಿದೆ ಎಂದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಕೂಡ ಮಹಿಳೆಯರಿಗಾಗಿ ಹಲವಾರು ಯೋಜನೆಗಳು ರೂಪಿಸಿವೆ. ಕುಟುಂಬದ ನಿರ್ವಹಣೆಯಲ್ಲಿ ಮುಖ್ಯಪಾತ್ರ ವಹಿಸುವ ಮಹಿಳೆಯರು ಸರಕಾರದ ಹಾಗೂ ಸಂಸ್ಥೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕಿದೆ. ಉಚಿತ ಬಸ್‌ಪ್ರಯಾಣ, ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರಿಗಾಗಿ ಪೂರಕ ಯೋಜನೆಗಳಾಗಿವೆ. ವಿರೋಧಿಗಳು ಇವುಗಳನ್ನು ವಿರೋಧಿಸುತ್ತಾರೆ. ಅಂತಹವರು ಮಹಿಳಾ ವಿರೋಧಿಗಳಾಗಿರುತ್ತಾರೆ. ಮಹಿಳೆಯರ ಭೌದ್ದಿಕಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಚಾರಗೋಷ್ಟಿಗಳು ಸಹಕಾರಿಯಾಗಲಿವೆ ಎಂದರು.
ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್ ಪ್ರಾಸ್ತವಿಕವಾಗಿ ಮಾತನಾಡಿ, ಮಹಿಳೆಯರ ಶಕ್ತಿ ಮಹಿಳೆಯರಿಗೆ ತಿಳಿದಿರುವುದಿಲ್ಲ. ಅವರ ಸಾಮಾರ್ಥ್ಯವನ್ನು ಇತರರು ತಿಳಿಸಬೇಕಿದೆ. ಒಬ್ಬ ಹೆಣ್ಣು ಸಮಾಜದ ಸಮಸ್ಯೆಗಳನ್ನು ಪರಿಹರಿಸಬಲ್ಲ ಶಕ್ತಿ ಹೊಂದಿರುತ್ತಾಳೆ. ಮೊದಲ ಗುರು ಸ್ಥಾನದಲ್ಲಿ ನಿಲ್ಲುವ ತಾಯಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ಅತ್ಯಾಚಾರ, ವ್ಯಭಿಚಾರಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ದುರಾದೃಷ್ಟಕರ ಸಂಗತಿ. ಸನಾತನ ಸಮಾಜ ಎತ್ತ ಸಾಗುತ್ತಿದೆ ಎಂಬಂತಾಗಿದೆ. 140 ಕೋಟಿ ದೇಶದ ಜನಸಂಖ್ಯೆ ಇದ್ದರೂ ಕೆಲವು ಉತ್ಪಾದನೆಗಳನ್ನು ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳುತ್ತೇವೆ. ಇದಕ್ಕೆ ಜ್ಞಾನದ ಕೊರತೆ ನಮ್ಮನ್ನು ಕಾಡುತ್ತಿದೆ. ಮಹಿಳೆಯರಿಗಾಗಿ ಅನೇಕ ಕಾನೂನುಗಳಿವೆ. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಜ್ಞಾನವೇ ಮುಖ್ಯವಾಗಲಿದೆ ಎಂದರು.
ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ಮಾಜಿ ಸದಸ್ಯೆ ರೇಖಾ ಪ್ರೇಮ್‌ಕುಮಾರ್ ನೈತಿಕ ಶಿಕ್ಷಣದಲ್ಲಿ ತಂದೆ ತಾಯಿ ಪಾತ್ರ ವಿಚಾರವಾಗಿ ಉಪನ್ಯಾಸ ನೀಡಿ ಮಾತನಾಡಿ, ಯಾರು ಬೇಕಾದರೂ ಶೈಕ್ಷಣಿಕವಾಗಿ ಅರ್ಹತೆ ಪಡೆಯಬಹುದು. ಆದರೆ ನೈತಿಕ ಶಿಕ್ಷಣ ಎಳವೆಯಿಂದಲೇ ದೊರೆಯಬೇಕು. ತಂದೆ ತಾಯಿಗಳ ಪಾತ್ರ ಇಲ್ಲಿ ಬಹುಮುಖ್ಯವಾಗಲಿದೆ. ಅವರು ಮಕ್ಕಳಿಗೆ ನೀಡಿದ ನೈತಿಕ ಶಿಕ್ಷಣ ಮತ್ತು ಸಂಸ್ಕಾರ ಅವರ ಜೀವಮಾನವಿಡೀ ಗೌರವ ತಂದುಕೊಡಲಿದೆ ಎಂದರು.
ಈ ಸಂದರ್ಭದಲ್ಲಿ ಸನ್ನಿಧಿ ಜ್ಞಾನವಿಕಾಸ ಕೇಂದ್ರದ ಸದಸ್ಯೆ ವಿಜಯಾಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಅನಿತಾ, ತಾಲ್ಲೂಕು ಯೋಜನಾಧಿಕಾರಿ ಪ್ರಸಾದ್, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಲಕ್ಷ್ಮೀ, ಸುಮಾ, ಗ್ರಾಪಂ ಸದಸ್ಯ ವಸಂತಕುಮಾರ್, ರವಿಕುಮಾರ್ ಹಾಗೂ ಸೇವಾ ಪ್ರತಿನಿಧಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!