ಕಡೂರನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿಸಲು ಸರಕಾರದ ಮಟ್ಟದಲ್ಲಿ ಹೋರಾಟ – ಕೆ.ಎಸ್.‌ ಆನಂದ್

ಸುದ್ದಿ ಕಡೂರು : ಬಹುತೇಕ ಎಲ್ಲಾ ಸೌಲಭ್ಯಗಳು ಜಿಲ್ಲಾಕೇಂದ್ರಕ್ಕೆ ನೀಡುವ ಪರಿಣಾಮ ತಾಲ್ಲೂಕು ಕೇಂದ್ರಗಳ ಅಭಿವೃದ್ದಿಯಲ್ಲಿ ಕುಂಠಿತವಾಗುತ್ತಿದೆ, ಜಿಲ್ಲಾ ಮಟ್ಟದ ಅಧಿಕಾರಿಗಳ ಮಲತಾಯಿ ಧೋರಣೆಯಿಂದಾಗಿ ಅಭಿವೃದ್ದಿಯಲ್ಲಿ ಮರೀಚಿಕೆಗೊಂಡಿದೆ. ಕಡೂರನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿಸಲು ಸರಕಾರದ ಮಟ್ಟದಲ್ಲಿ ಹೋರಾಟ ಮುಂದುವರಿಸಲಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಹೊರವಲಯದ ಬಳಿಯ ಹರುವನಹಳ್ಳಿ ಗ್ರಾಮ ವ್ಯಾಪ್ತಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಬುಧವಾರ ಸ್ಥಳಾಂತರಗೊಂಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಡೂರು ಭಾಗದಲ್ಲಿ ಶಿಕ್ಷಣ, ಕೈಗಾರಿಕೆ ಅಥವಾ ತಾಂತ್ರಿಕ ಶಿಕ್ಷಣ ಎಲ್ಲದಕ್ಕೂ ವಿಫುಲ ಅವಕಾಶವಿದೆ. ಆದರೆ ಇಲ್ಲಿಯ ತನಕ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಹಾಲು ಒಕ್ಕೂಟ ಅಥವಾ ಇನ್ಯಾವುದೇ ಮಹತ್ವದ ಕೊಡುಗೆ ಮಂಜೂರಾದರೆ ಎಲ್ಲವೂ ಚಿಕ್ಕಮಗಳೂರಿನಲ್ಲೇ ಆಗಬೇಕೆನ್ನುವ ಧೋರಣೆಯಿಂದ ಕಡೂರು ಮಾತ್ರ ಅಭಿವೃದ್ದಿ ವಿಚಾರದಲ್ಲಿ ಹಿಂದುಳಿಯುವಂತಾಗುತ್ತಿದೆ. ಕಡೂರು ಚಿಕ್ಕಮಗಳೂರು ಜಿಲ್ಲೆಯೊಳಗಿಲ್ಲದಿದ್ದರೆ ಅಭಿವೃದ್ಧಿಯಲ್ಲಿ ಈ ಹೊತ್ತಿಗೆ ತುಮಕೂರನ್ನು ಮೀರಿಸುತ್ತಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿಯ ತನಕವೂ ಈ ಜಿಲ್ಲೆಯೊಳಗಿದ್ದೂ ಕಡೂರು ಮಲತಾಯಿ ಧೋರಣೆಗೊಳಗಾಗಿದೆಯೆಂಬ ಭಾವನೆ ದಟ್ಟವಾಗುತ್ತಿದೆ. ಇನ್ನು ಮುಂದಾದರೂ ಈ ಭಾವನೆ ದೂರಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರಕ್ಕೆ ಈ ಹಿಂದೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಮಂಜೂರಾಯಿತು. ಈಗ ಅದು ಯಾವ ಹಂತದಲ್ಲಿದೆ? ಸಮರ್ಪಕ ಜಾಗ ದೊರೆತಿದೆಯೇ? ಗುಡ್ಡ ಗಾಡು, ಮಲೆನಾಡು ಪ್ರದೇಶದಲ್ಲಿ ಬಹುತೇಕ ವಿದ್ಯಾರ್ಥಿಗಳು ಹೋಗಲು ಬಹುಶಃ ಕಷ್ಟವಾಗುತ್ತದೆ. ಅದೇ ಶೈಕ್ಷಣಿಕ ಸವಲತ್ತುಗಳನ್ನು ಕಡೂರಿಗೆ ನೀಡಿದರೆ ಅಗತ್ಯವಾದಷ್ಟು ಜಾಗ ನೀಡಲು ಸಿದ್ದವಿದ್ಧೇವೆ. ಅಭಿವೃದ್ದಿ ದೃಷ್ಟಿಯಿಂದ ಕಡೂರು ತಾಲ್ಲೂಕಿನ ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆ ಇಡೀ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿದೆ. ಅಭಿವೃದ್ಧಿಯಾಗಲು ಜಿಲ್ಲೆಗೆ ಮಂಜೂರಾಗುವ ಯೋಜನೆಗಳನ್ನು ಕಡೂರಿನಲ್ಲಿ ಅನುಷ್ಟಾನಗೊಳಿಸಿ. ಇಲ್ಲವೆ ಈ ಜಿಲ್ಲೆಯಿಂದ ಕೈಬಿಟ್ಟು ಕಡೂರನ್ನೇ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲು ಮುಂದಾಗಬೇಕೆಂಬ ಕೂಗು ರಾಜ್ಯ ಸರಕಾರದ ಗಮನಸೆಳೆಯಲಾಗುತ್ತದೆ ಎಂದರು.
ತಾಲ್ಲೂಕಿನ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ ನಮ್ಮ ಕರ್ತವ್ಯ. ಅಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದ್ದೇನೆ. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಅಗತ್ಯವಾಗಿರುವ ಎಲ್ಲ ಸೌಕರ್ಯ ಕಲ್ಪಿಸಲು ಸೂಚನೆ ನೀಡಿದ್ದೇನೆ. ಈ ಆವರಣ ಒಂದು ತಂತ್ರಜ್ಞಾನ ಸಮುಚ್ಚಯವಾಗಬೇಕೆಂಬ ಆಶಯ ನನ್ನದಾಗಿದೆ. ಇಲ್ಲಿ ಒಂದು ಇಂಜಿನಿಯರಿAಗ್ ಕಾಲೇಜು ಆರಂಭವಾದರೆ ಶೈಕ್ಷಣಿಕವಾಗಿ ದೊಡ್ಡ ಕೊಡುಗೆಯಾಗುತ್ತದೆ. ಸದರಿ ಪಾಲಿಟೆಕ್ನಿಕ್ ಉದ್ಘಾಟನೆಗೆ ಉನ್ನತ ಶಿಕ್ಷಣ ಸಚಿವರನ್ನು ಆಹ್ವಾನಿಸಿ ಈ ಕುರಿತು ಮನವಿ ಸಲ್ಲಿಸಲಾಗುವುದು. ಜಿಲ್ಲೆಗೆ ಮಂಜೂರಾಗಿರುವ ಹಾಲು ಒಕ್ಕೂಟ ಕಡೂರಿನಲ್ಲಿಯೇ ಸ್ಥಾಪನೆಯಾಗಬೇಕೆಂಬುದು ನಮ್ಮ ಒತ್ತಾಸೆಯಾಗಿದೆ. ಒಟ್ಟಾರೆ ಕಡೂರು ಶೈಕ್ಷಣಿಕವಾಗಿ, ಕೈಗಾರಿಕೆ ಮತ್ತಿತರೆ ರಂಗಗಳಲ್ಲಿ ಎತ್ತರಕೇರಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ. ಸೋಮಶೇಖರ್ ಮಾತನಾಡಿ, ಅತೀ ಹೆಚ್ಚು ವಿದ್ಯಾರ್ಥಿ ನಿಲಯಗಳಿರುವ ಕಡೂರು ತಾಲ್ಲೂಕಿನಲ್ಲಿ 2.10 ಕೋಟಿ ಹಾಸ್ಟೆಲ್ ದುರಸ್ತಿ ಮತ್ತಿತರ ಕಾರ್ಯಗಳಿಗಾಗಿ ಮಂಜೂರಾಗಿದೆ. ಹಳೆಯ ಕಟ್ಟಡದಲ್ಲಿದ್ದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ತಾತ್ಕಾಲಿಕವಾಗಿ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಡಿಪ್ಲೊಮೋ ಕಾಲೇಜಿನ ವಸತಿ ನಿಲಯವನ್ನು ಬಿಸಿಎಂ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣದಲ್ಲಿ ಕೆಲ ತಾಂತ್ರಿಕ ಅಡಚಣೆಗಳಿದ್ದು, ಅವುಗಳ ನಿವಾರಣೆಗಾಗಿ ಶಾಸಕರ ಗಮನಕ್ಕೆ ತಂದಿದ್ದೇವೆ. ಪ್ರಸ್ತುತ ಪಾಲಿಟೆಕ್ನಿಕ್ ಇರುವ ಜಾಗ ವಿಶಾಲವಾಗಿದ್ದು, ಇಲ್ಲಿ ಇಂಜಿಬಿಯರಿಂಗ್ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಶಾಸಕರು ಸೂಚಿಸಿದ್ದಾರೆ. ತಾಂತ್ರಿಕ ಶಿಕ್ಷಣದಲ್ಲಿ ಎತ್ತರಕ್ಕೇರುವ ಎಲ್ಲ ಅವಕಾಶಗಳು ಲಭ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೀಶ್, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಎಚ್.ಮಂಜುನಾಥ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಮುರುಳಿಧರ್, ವಸತಿ ನಿಲಯದ ಮೇಲ್ವಿಚಾರಕರಾದ ದೇವರಾಜ್, ಅನಿಲ್‌ಕುಮಾರ್, ಡಿ. ಮಂಜುನಾಥ್, ಮಮತಾ, ಸರಸ್ವತಿ, ವಿದ್ಯಾ, ಕವಿತಾ, ಪ್ರೇಮ, ಜಯಂತಿ, ರವಿಕುಮಾರ್, ರಮ್ಯಾ, ಮೆಹಬೂಬಿ, ನಿಸಾರ್ ಅಹ್ಮದ್,ಶ್ರೀನಿವಾಸ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!