3 ತಿಂಗಳಲ್ಲಿ ಕಡೂರು ನಗರಸಭೆ -ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್

ಸುದ್ದಿ ಕಡೂರು : ಬಿಜೆಪಿ ಸರಕಾರ ಜಾತಿ ಮತ್ತು ಧರ್ಮವನ್ನು ಮುಂದಿಟ್ಟುಕೊಡು ಮತ ಕೇಳುತ್ತದೆ. ಆದರೆ ಕಾಂಗ್ರೆಸ್ ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ.ಜನರು ಸಹಜವಾಗಿ ಅಭಿವೃದ್ದಿಯನ್ನು ಒಪ್ಪುತ್ತಾರೆ.ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಪಡೆಯಲಿದೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ 5 ಗ್ಯಾರಂಟಿಗಳ ಜತೆಗೆ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲಿದೆ.ಸರಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ.ಆದರೆ ಈ ಹಿಂದಿನ ಬಿಜೆಪಿ ಸರಕಾರ ಇಡೀ ವ್ಯವಸ್ಥೆಯನ್ನು ಹಾಳು ಮಾಡಿ ಹೋಗಿದೆ.ಅವರು ಮಾಡಿಟ್ಟು ಹೋಗಿರುವ ಸಾಲವನ್ನು ತೀರಿಸುವುದೇ ಸದ್ಯ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರ ಚುನಾವಣಾಪೂರ್ವ ನೀಡಿದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಸರ್ವ ಸಮುದಾಯಗಳ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತಹ ಆಡಳಿತ ನೀಡುವುದು ಸರ್ಕಾರದ ಗುರಿ.ಅದೇ ರೀತಿ ಆಡಳಿತ ನೀಡುತ್ತಲಿದೆ. ಸಾರ್ವಜನಿಕರ ಹಣ ಕಳ್ಳರ ಪಾಲಾಗದಂತೆ ತಡೆದು ಅದೇ ಹಣ ಸದ್ಬಳಕೆ ಮಾಡಿಕೊಂಡು ಸಮಾನ ಪ್ರಾಮುಖ್ಯತೆ ನೀಡಿ ಜನರಿಗೆ ನೆಮ್ಮದಿ ನೀಡುವುದು ಸರ್ಕಾರದ ಮುಖ್ಯ ಆಶಯವಾಗಿದೆ ಎಂದರು.
ಮೂರು ತಿಂಗಳಲ್ಲಿ ಕಡೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಕಡೂರು ಬೀರೂರು ಅವಳಿ ಪಟ್ಟಣಗಳ ಅಭಿವೃದ್ದಿಗೆ ಅಗತ್ಯ ಸಂಪಲ್ಮೂನ ಒದಗಿಸಲಾಗುವುದು. ಪಕ್ಷಕ್ಕೆ ಐದು ಶಾಸಕರನ್ನು ಜಿಲ್ಲೆ ನೀಡಿದೆ. ಶಾಸಕ ಕೆ.ಎಸ್.ಆನಂದ್ ಯುವಕ. ಅವರಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒಂದು ಕನಸು ಇದೆ. ಆ ಕನಸು ನನಸಾಗಿಸಲು ನಮ್ಮ ಸರ್ಕಾರ ಮತ್ತು ನಾವೆಲ್ಲರೂ ಜೊತೆಗಿದ್ದು ಸಹಕಾರ ನೀಡುತ್ತೇವೆ. ಭಧ್ರಾ ಉಪಕಣಿವೆ ಯೋಜನೆಯನ್ನು ನಬಾರ್ಡ್ ಟ್ರಾಂಚಿ ಯೋಜನೆಗೆ ಸೇರಿಸಲು ಕೆ.ಎಸ್.ಆನಂದ್ ಪ್ರಸ್ತಾಪನೆ ಸಲ್ಲಿಸಿದ್ದಾರೆ. ಆ ವಿಚಾರವಾಗಿ ಖುದ್ದು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಜೊತೆ ಮಾತನಾಡಿ ಒಪ್ಪಿಸುತ್ತೇನೆ ಎಂದರು.
ಹಿಜಾಬ್ ವಿಚಾರವಾಗಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಸಮಾನತೆ ಮತ್ತು ಶಾಂತಿ ಸೌಹಾರ್ದತೆ ಮಾತ್ರ ನಮ್ಮ ಗುರಿ. ಧರ್ಮಗಳ ನಡುವೆ ವೈಮನಸ್ಯ ತಂದಿಡುವುದು ನಮ್ಮ ಕಾರ್ಯವಲ್ಲ. ನಮ್ಮದೇನಿದ್ದರೂ ಜನತೆಗೆ ಉತ್ತಮ ಆಡಳಿತ ನೀಡುವುದು, ಮೂಲಸೌಕರ್ಯ ಕಲ್ಪಿಸುವುದು ಮಾತ್ರ.ಶಿವಾನಂದ ಪಾಟೀಲರು ರೈತರ ಬಗ್ಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವೆಲ್ಲರೂ ರೈತರ ಮಕ್ಕಳು. ರೈತರ ಬಗ್ಗೆ ಎಲ್ಲಿಯೂ ತಮಾಷೆ ಮಾಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಮೋಹನ್‌ಕುಮಾರ್, ಕಂಸಾಗರ ಸೋಮಶೇಖರ್, ಬಾಸೂರು ಚಂದ್ರಮೌಳಿ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!