ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ದ್ವಿತೀಯ ಪಿಯುಪರೀಕ್ಷೆ : ಮಾ1ರಿಂದ ಎಕ್ಸಾಂ ಶುರು

ಸುದ್ದಿ ಕಡೂರು : ಮಾ.1ರಿಂದ 22ರವರೆಗೆ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಿದ್ದತೆಗಳು ನಡೆದಿದ್ದು, ತಾಲ್ಲೂಕಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ 1992 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಅಕ್ರಮಗಳ ತಡೆಗೆ ಸಿಸಿ ಕ್ಯಾಮೆರಾ ಕಣ್ಗಾವಲು ಸೇರಿದಂತೆ ಹಲವು ದಿಟ್ಟಕ್ರಮಗಳನ್ನು ಕೈಗೊಂಡು ಕಟ್ಟೆಚ್ಚರ ವಹಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ 791 ಪರೀಕ್ಷಾರ್ಥಿಗಳು ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜು 780 ಪರೀಕ್ಷಾರ್ಥಿಗಳು, ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 250 ವಿದ್ಯಾರ್ಥಿಗಳು ಹಾಗೂ ಸಖರಾಯಪಟ್ಟಣದ ಪದವಿ ಪೂರ್ವ ಕಾಲೇಜು ಕೇಂದ್ರಗಳಲ್ಲಿ 171 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊ೦ಡಿದ್ದಾರೆ. ವಿದ್ಯಾರ್ಥಿಗಳಿಗೆ ಯಾವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಈಗಾಗಲೇ ಸೂಚಿಸಲಾಗಿದ್ದು ಯಾವುದೇ ಸಮಸ್ಯೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪರೀಕ್ಷೆ ಯಶಸ್ವಿಗೆ ವಿಶೇಷ ಜಾಗೃತ ದಳ, ಮೊಬೈಲ್ ಸ್ಕ್ವಾಡ್ ಗಳನ್ನು ನಿಗಧಿತವಾಗಿ ನೇಮಿಸಲಾಗಿದೆ. ಭದ್ರತೆ, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ವಿದ್ಯಾರ್ಥಿಗಳ ಚಲನವಲನಗಳ ಮೇಲೆ ಕಣ್ಣಿಡಲು ನಿರ್ಧರಿಸಲಾಗಿದೆ. ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ಮೊಬೈಲ್ ಹಾಗೂ ಇನ್ನಿತರೆ ಎಲೆಕ್ಟಾçನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ನಿರ್ಬಂಧಿಸಲಾಗಿದೆ. ದಾಖಲಾತಿ ಪತ್ರದಲ್ಲಿನ ಪರೀಕ್ಷಾ ನಿಯಮಗಳ ಸೂಚನೆಗಳನ್ನು ಓದಿಕೊಂಡು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ತವರಾಜ್ ಮಾಹಿತಿ ಹಂಚಿಕೊಂಡರು.

ಜಿಲ್ಲಾದ್ಯಂತ 18 ಪರೀಕ್ಷಾ ಕೇಂದ್ರಗಳಲ್ಲಿ 8392 ಪರೀಕ್ಷಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನೊಂದಾಯಿಸಿಕೊ೦ಡಿದ್ದು, ಯಾವುದೇ ಅಕ್ರಮಗಳು ನಡೆಯದಂತೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಗ್ರಾಮೀಣ ಭಾಗದ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೇಂದ್ರಗಳಿಗೆ ತೆರಳಲು ಸಾರಿಗೆ ಬಸ್ಸಿನಲ್ಲಿ ತಮ್ಮ ಪ್ರವೇಶಾತಿ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ. ಪರೀಕ್ಷಾ ಕೇಂದ್ರಗಳಿಗೆ ಕೊಠಡಿ ಮೇಲ್ಚಿಚಾರಕರು ಜಾಗೃತೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ವಿಶೇಷ ಜಾಗೃತ ದಳದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳ ಪರಿಶೀಲನೆ ನಡೆಸಿದ್ದು ಕಟ್ಟುನಿಟ್ಟಿನ ಪರೀಕ್ಷೆಗೆ ಸೂಚನೆ ನೀಡಲಾಗಿದೆ. ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಲಾಗಿದೆ ಎಂದು ಪಿಯು ಉಪನಿರ್ದೇಶಕ ಪುಟ್ಟನಾಯ್ಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!